ಕಡಲ್ಕೊರೆತಕ್ಕೆ ಬಟ್ಟಪ್ಪಾಡಿ ತತ್ತರ : ತೈಲ ಸೋರಿಕೆ ಭೀತಿಯೊಂದಿಗೆ ಅಲೆಗಳ ಹೊಡೆತ

ಉಳ್ಳಾಲ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಉಚ್ಚಿಲ ಬಟ್ಟಪ್ಪಾಡಿ ಪರಿಸರದಲ್ಲಿ ಕಡಲ್ಕೊರೆತ ತೀವ್ರಗೊಂಡು ವ್ಯಾಪಕ ಹಾನಿಯುಂಟು ಮಾಡಿದೆ.  ಒಂದು ರೆಸಾರ್ಟ್‌ ಸಂಪೂರ್ಣ ಸಮುದ್ರಪಾಲಾಗುವ ಹಂತದಲ್ಲಿದೆ. ಮೂರು ಮನೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸಲು ಆರಂಭಿಸಿದೆ. 1 ಕಿ.ಮೀ ಉದ್ದದ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿರುವುದರಿಂದ 20 ಮನೆಮಂದಿಗೆ ಮುಖ್ಯ ರಸ್ತೆಯ ಸಂಪರ್ಕ ಕಡಿತವಾಗಿದೆ.

ಸಿರಿಯಾ ಹಡಗು ಮುಳುಗಡೆಯೂ ಇದೇ ಪ್ರದೇಶದಲ್ಲಿರುವುದರಿಂದ ತೈಲ ಸೋರಿಕೆಯಿಂದ ಜನ ಆತಂಕದಲ್ಲಿ ಮುಳುಗಿದ್ದಾರೆ. ಒಂದು ವಾರದಲ್ಲಿ 50ಕ್ಕಿಂತ ಅಧಿಕ ತೆಂಗಿನ ಮರಗಳು ಸಮುದ್ರಪಾಲಾಗಿವೆ. ಉಚ್ಚಿಲದಿಂದ ಬಟ್ಟಪ್ಪಾಡಿ ರಸ್ತೆ 4 ವರ್ಷಗಳಿಂದ ಮುರಿದ ಸ್ಥಿತಿಯಲ್ಲೇ ಇತ್ತು. ಇದೀಗ ಮತ್ತೆ ಒಂದು ಕಿ.ಮೀ ಉದ್ದದಷ್ಟು ರಸ್ತೆ ಸಂಪೂರ್ಣವಾಗಿ ಸಮುದ್ರದ ಒಡಲಿಗೆ ಸೇರಿದೆ.   ಇದರಿಂದ ಬಟ್ಟಪ್ಪಾಡಿ ಪರಿಸರದಲ್ಲಿರುವ 20ಕ್ಕೂ ಅಧಿಕ ಮನೆಮಂದಿ ರಸ್ತೆ ಸಂಪರ್ಕ ಕಡಿತವಾಗಿದೆ.  ಅಪಾಯದಿಂದ ಇರುವ ಮುರಿದ ರಸ್ತೆಯಲ್ಲೇ  ಮಕ್ಕಳನ್ನು ಹೊತ್ತ ತಾಯಂದಿರು,  ಮಕ್ಕಳು ,  ವೃದ್ಧರು ಕಷ್ಟಪಟ್ಟು ತೆರಳಬೇಕಾಗಿದೆ. ವಾಹನ ತೆರಳಲು ಸಾಧ್ಯವಾಗದೆ ಕಿ.ಮೀ ಉದ್ದಕ್ಕೂ ನಡೆದುಕೊಂಡು ಹೋಗಬೇಕಾಗಿದೆ.

ಆಲಿಚ್ಚ, ಜುಬೈದಾ, ಪ್ರವೀಣ್‌ ಬಟ್ಟಪ್ಪಾಡಿ  ಎಂಬವರ ಮನೆಗಳು ಅಪಾಯದಂಚಿನಲ್ಲಿದ್ದರೆ, ರಾಜೀವಿ ಎಂಬವರ ಮನೆಗೆ ಅಲೆಗಳು ಬಡಿಯಲು ಆರಂಭಿಸಿದೆ.  ಇನ್ನೊಂದು ಭಾಗದಲ್ಲಿರುವ ರೆಸಾರ್ಟ್‌ ಕಟ್ಟಡಕ್ಕೂ ಅಲೆಗಳು ಬಡಿಯುತ್ತಿದೆ.  ರೆಸಾರ್ಟ್‌ ಆವರಣದಲ್ಲಿದ್ದ ತೆಂಗಿನ ಮರ, ಆವರಣಗೋಡೆ,  ಇಂಟರ್‌ ಲಾಕ್‌ ಎಲ್ಲವೂ ಸಮುದ್ರಪಾಲಾಗಿವೆ. ನಾಳೆಯೊಳಗೆ ಕಟ್ಟಡ ಸಂಪೂರ್ಣ ಸಮುದ್ರಪಾಲಾಗುವ ಅಭಿಪ್ರಾಯ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಡೆಮೋ ಅಗತ್ಯವಿಲ್ಲ, ತುರ್ತು ಕಾರ್ಯಾಚರಣೆ ಅಗತ್ಯವಿತ್ತು !

ಬಟ್ಟಪ್ಪಾಡಿ ಪರಿಸರವನ್ನು ಎದುರು ಹಾಕಿ ಕಮೀಷನ್‌ ಹೊಡೆಯುವಷ್ಟೇ ಕೆಲಸಗಳಾಗುತ್ತಿವೆ. ಜನರನ್ನು ಮೋಸಗೊಳಿಸಿ ಲಾಭ  ಗಳಿಸುವವರೇ ಬೇರೆಯವರಾಗಿದ್ದಾರೆ.  

ಮುಳುಗಿದ ಹಡಗಿನಿಂದ ತೈಲ ಸೋರಿಕೆಯಾಗುತ್ತಿದೆ. ಇದರಿಂದ ತೀರದ ಎಲ್ಲಾ ನಿವಾಸಿಗಳಿಗೆ ಜಲಚರಗಳಿಗೆ ತೊಂದರೆಯಾಗಿದೆ. ಮೀನುಗಾರಿಕೆ ನಡೆಸುವುದೇ ಕಷ್ಟಕರವಾಗಿದೆ. ಫೆಬ್ರವರಿಯಿಂದ ಕೊರೆತ ಆರಂಭವಾಗಿದೆ, ಜಿಲ್ಲಾಡಳಿತವಾಗಲಿ, ಸರಕಾರವಾಗಲಿ ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ರಸ್ತೆ ಮುರಿದು ನಾಲ್ಕು ವರ್ಷಗಳಾದರೂ ದುರಸ್ತಿ ನಡೆಸಿಲ್ಲ. ಎಂಡ್‌ ಪಾಯಿಂಟ್‌ ನಿಂದ ಹೋಗಿರುವ ರಸ್ತೆ ಕೆಲವೇ ದಿನಗಳಲ್ಲಿ ಕೋಟೆ ದೇವಸ್ಥಾನದವರೆಗೂ ರಸ್ತೆ ಕುಸಿಯುವ ಭೀತಿಯಿದೆ. ಶಾಲೆಗೆ ಹೋಗುವ ಮಕ್ಕಳು, ರೋಗಿಗಳು , ವೃದ್ಧರು  ತೆರಳಲು ರಸ್ತೆಯ ವ್ಯವಸ್ಥೆ ಇಲ್ಲದಾಗಿದೆ.  ಸ್ಥಳೀಯರಿಗೆ ರೆಸಾರ್ಟ್‌ ಒಳಗಿನಿಂದ ತೆರಳಲು ಮಾಲೀಕರು ಬಿಡುತ್ತಿಲ್ಲ.   ಸೀ ವಾಲ್‌ ಸ್ಥಾಪಿಸಲು ಹಲವು ವರ್ಷಗಳಿಂದ ಸ್ಥಳೀಯರು ಹೋರಾಟ ನಡೆಸಿದರೂ ಜಿಲ್ಲಾಡಳಿತ ಗಮನಕ್ಕೆ ತೆಗೆದುಕೊಂಡಿಲ್ಲ.  ಉಚ್ಚಿಲ ಬಟ್ಟಪ್ಪಾಡಿ ಪ್ರದೇಶ ಎಲ್ಲಾ ವಿಚಾರಗಳಲ್ಲಿ ತಿರಸ್ಕೃತ ಪ್ರದೇಶವಾಗಿಬಿಟ್ಟಿದೆ.

ಈಗಿರುವ ಸಮುದ್ರದ ರಭಸ ಗಮನಿಸಿದಾಗ  ಮನೆಮಂದಿ ಮಲಗಿದ ಸಮಯದಲ್ಲಿ  ಒಮ್ಮೆಲೇ ನುಗ್ಗುವ ಸಾಧ್ಯತೆಯೂ ಇದೆ. ಶಾಸಕರು ಬಿಜೆಪಿ ಆಡಳಿತದಲ್ಲಿರುವ  ರಾಜ್ಯ ಸರಕಾರ,  ಪಟ್ಟಣ ಪಂಚಾಯಿತಿ ಗಮನಹರಿಸುತ್ತಿಲ್ಲ ಎಂದು ಆರೋಪಿಸಿದರೆ, ಸಂಸದರು  ಸ್ಥಳೀಯ ಶಾಸಕರ ವೈಫಲ್ಯವೆಂದು ದೂರುವುದರಲ್ಲೇ ನಿರತರಾಗಿದ್ದಾರೆ. ಉಚ್ಚಿಲದ ಜನರನ್ನು ಸಮಸ್ಯೆಗೆ ಸಿಲುಕಿಸಿ, ಬೇಡದ ಕೆಲಸಗಳನ್ನು ನಡೆಸಿ ಕಮೀಷನಷ್ಟೇ ಹೊಡೆಯುವ ಕೆಲಸಗಳಾಗುತ್ತಿದೆ. ಹಡಗು ಕಾರ್ಯಾಚರಣೆಗೆ ಅಣುಕು ಪ್ರದರ್ಶನದ ಅಗತ್ಯವಿರಲಿಲ್ಲ. ತುರ್ತಾಗಿ ತೆರವುಗೊಳಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಬೇಕಿತ್ತು. ಆದರೆ  ಸುರಕ್ಷಾ ದಳಗಳಿಂದ  ಕೋಟ್ಯಂತರ ವ್ಯಯಿಸಿ ಅಣುಕು ಕಾರ್ಯಾಚರಣೆ ನಡೆಸಿ ಅದರಲ್ಲೂ ಕಮೀಷನ್‌ ಹೊಡೆಯುವ ಕೆಲಸವಾಯಿತೇ ಅನ್ನುವ ಸಂಶಯ ಮೂಡಿದೆ ಎಂದು ಸ್ಥಳೀಯ ಸುಖೇಶ್‌ ತಿಳಿಸಿದ್ದಾರೆ. 

Related Posts

Leave a Reply

Your email address will not be published.