ಭವಿಷ್ಯ ನಿಧಿ ಕಚೇರಿಯ ಮುಂದೆ ಪಿಂಚಣಿದಾರರ ಪ್ರತಿಭಟನೆ

ಮಂಗಳೂರು, ಆ.25: ಪೆನ್‌ಶನ್ ಏಕತಾ ಸಂಘರ್ಷ ಮಂಚ್ ದೇಶವ್ಯಾಪಿ ಕರೆ ನೀಡಲಾದ ಪ್ರತಿಭಟನಾ ಪ್ರದರ್ಶನಕ್ಕೆ ಬೆಂಬಲವಾಗಿ ಮಂಗಳೂರಿನ ಭವಿಷ್ಯ ನಿಧಿ ಕಚೇರಿಯ ಮುಂದೆ ಗುರುವಾರ ಪಿಂಚಣಿದಾರರು ಪ್ರತಿಭಟಿಸಿದರು. ಪಿಂಚಣಿದಾರರ ಸಂಘದ ದ.ಕ.ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಮಾತನಾಡಿ ಕಳೆದ 8 ವರ್ಷಗಳಿಂದ ಪಿಂಚಣಿಯಲ್ಲಿ ಏರಿಕೆ ಆಗಿಲ್ಲ. ಕೊಶಿಯಾರಿ ಸಮಿತಿಯು ಕನಿಷ್ಠ ಪಿಂಚಣಿ 3,000 ರೂ.ಕೊಡಬಹುದು ಎಂದು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿ 3 ವರ್ಷ ಕಳೆದರೂ ಕೂಡ ಸರಕಾರ ಮೌನಕ್ಕೆ ಶರಣಾಗಿದೆ ಎಂದು ಆಪಾದಿಸಿದರು.

ಜಿಲ್ಲಾ ಕಾರ್ಯದರ್ಶಿ ಸುಕುಮಾರ್ ಮಾತನಾಡಿ ದೇಶದ ಜನತೆಯ ಶೇ.10ರಷ್ಟಿರುವ ಹಿರಿಯ ನಾಗರಿಕರ ಜವಾಬ್ದಾರಿ ಸರಕಾರ ವಹಿಸಲು ನಿರಾಕರಿಸಿದೆ. ಅಲ್ಲದೆ ಅವರ ಹೊಣೆಯನ್ನು ಮಕ್ಕಳಿಗೆ ಮತ್ತು ಸಂಬಂಧಿಗಳಿಗೆ ವರ್ಗಾಯಿಸಿ ಕಾನೂನು ಮಾಡಿದೆ. ಇದು ಸಂವಿಧಾನ ವಿರೋಧಿ ಕ್ರಮವಾಗಿದೆ. ದೇಶದ 78 ಲಕ್ಷ ಪಿಂಚಣಿದಾರರಿಗೆ ತಿಂಗಳಿಗೆ ಕನಿಷ್ಠ 9000 ರೂ. ಪಿಂಚಣಿ ಸಿಗಬೇಕು. ಪೆನ್‌ಶನ್‌ಗೂ ತುಟ್ಟಿಭತ್ತೆ ಅನ್ವಯಿಸಬೇಕು, ಉಚಿತ ವೈದ್ಯಕೀಯ ಸವಲತ್ತು ನೀಡಬೇಕು, ಪಿಂಚಣಿದಾರರ ಪರವಾಗಿ ಬಂದ ಕೋರ್ಟು ತೀರ್ಪು ಜಾರಿಯಾಗಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಯು.ಬಿ.ಲೋಕಯ್ಯ, ಸದಾಶಿವ ದಾಸ್, ಪದ್ಮಾವತಿ ಶೆಟ್ಟಿ, ಜಯಂತಿ ಶೆಟ್ಟಿ, ರಮಣಿ ಮೂಡುಬಿದಿರೆ, ರಾಧಾ ಮೂಡುಬಿದಿರೆ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಉಪಾಧ್ಯಕ್ಷ ವಸಂತ ಆಚಾರಿ, ವಿಲಾಸಿನಿ ತೊಕ್ಕೊಟ್ಟು, ಬಾಬು ದೇವಾಡಿಗ, ಭಾರತಿ ಬೋಳಾರ, ನಾಗೇಶ್ ಕೋಟ್ಯಾನ್, ಗಂಗಯ್ಯ ಅಮೀನ್, ನೋಣಯ್ಯ ಗೌಡ, ಯಶೋಧಾ ಮಳಲಿ, ವಸಂತಿ ಕುಪ್ಪೆಪದವು, ಲೋಲಾಕ್ಷಿ ಬಂಟ್ವಾಳ ಪಾಲ್ಗೊಂಡಿದ್ದರು.
