ಒಬ್ಬಂಟಿ ವೃದ್ಧೆಯ ಕೊಲೆ ದರೋಡೆ ಪ್ರಕರಣದ ಆರೋಪಿ ವೃದ್ಧೆಯ ಸಂಬಂಧಿಕ ಅಶೋಕ್ ಬಂಧನ

ಬೆಳ್ತಂಗಡಿ : ಮನೆಯಲ್ಲಿ ಒಬ್ಬಂಟಿಯಾಗಿದ್ದ ಅಜ್ಜಿಯನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಚಿನ್ನಾಭರಣ ಹಾಗೂ ಹಣ ದರೋಡೆ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೆರೆಕೋಡಿ ಮನೆಯಲ್ಲಿ ನಡೆದಿದೆ. ಕಡಿರುದ್ಯಾವರ ಗ್ರಾಮದ ಕಾನರ್ಪ ಕುಮೇರು ನಿವಾಸಿ ಅಶೋಕ್ (28) ವೃದ್ಧೆಯನ್ನು ಕೊಲೆಗೈದ ಆರೋಪಿ. ಅಶೋಕ್ ಕೊಲೆಯಾದ ಅಕ್ಕು ಅವರ ಪುತ್ರ ಡೀಕಯ್ಯ ಅವರ ಪತ್ನಿಯ ಸಹೋದರಿಯ ಪುತ್ರನಾಗಿದ್ದ. ಈತ ಐಸ್ ಕ್ರೀಂ ವಾಹನದಲ್ಲಿ ಕೆಲಸ ಮಾಡುತ್ತಿದ್ದ. ಮದ್ಯವ್ಯಸನಿಯಾಗಿದ್ದ ಅಶೋಕ್, ಕೆಲ ಸಮಯಗಳಿಂದ ಕೆಲಸ ತೊರೆದು ಮನೆಯಲ್ಲಿಯೇ ಇದ್ದ. ಈತ ಸಂಬಂಧಿಯಾಗಿದ್ದ ಹಿನ್ನೆಲೆಯಲ್ಲಿ ಡೀಕಯ್ಯ ಅವರ ಮನೆಗೆ ಹಣ ಕೇಳಲು ಬರುತ್ತಿದ್ದ.
ಆದರೆ, ನಿನ್ನೆ ಮನೆಗೆ ಬಂದ ಅಶೋಕ್ ಬೆಳಗ್ಗಿನ ಹೊತ್ತು ಮನೆಯಲ್ಲಿ ಯಾರೂ ಇಲ್ಲದ ವೇಳೆ ವೃದ್ಧೆ ಅಕ್ಕುವಿಗೆ ಹಲ್ಲೆ ಮಾಡಿ ಆಕೆಯ ಕಿವಿಯೋಲೆಯನ್ನು ಹರಿದು ತೆಗೆದಿದ್ದಾನೆ. ಅಲ್ಲದೆ ಮನೆಯಲ್ಲಿದ್ದ ಹಣವನ್ನು ದರೋಡೆಗೈದಿದ್ದಾನೆ. ಮನೆಗೆ ಅಶೋಕ್ ಬಂದಿರುವುದನ್ನು ಸ್ಥಳೀಯ ನಿವಾಸಿಯೊಬ್ಬರು ನೋಡಿದ್ದರು. ಇದನ್ನು ಆತ ಡೀಕಯ್ಯ ಅವರಿಗೆ ತಿಳಿಸಿದ್ದಾನೆ. ಅವರು ಅಶೋಕ್ ಗೆ ಕರೆ ಮಾಡಿದಾಗ ಆತ ತಾನು ‘ನಾರಾವಿಯಲ್ಲಿ ಇದ್ದೇನೆ’ ಎಂದು ಹೇಳಿದ್ದಾನೆ.
ಅನುಮಾನದ ಹಿನ್ನೆಲೆಯಲ್ಲಿ ಅವರು ಧರ್ಮಸ್ಥಳ ಪೆÇಲೀಸರಿಗೆ ಆತನ ಮೊಬೈಲ್ ಸಂಖ್ಯೆ ನೀಡಿದ್ದಾರೆ. ಆತನ ಮೊಬೈಲ್ ಲೊಕೇಷನ್ ಪರಿಶೀಲನೆ ಮಾಡಿದಾಗ ಆತ ನಾರಾವಿಯಲ್ಲಿ ಇರದೆ ಬದಲಾಗಿ ಉಜಿರೆಯ ಸೋಮಂತಡ್ಕದಲ್ಲಿರೋದು ಪತ್ತೆಯಾಗಿದೆ. ಆತನಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದಾಗ ಅಶೋಕ್ ಕಂಠಪೂರ್ತಿ ಮದ್ಯಸೇವನೆ ಮಾಡಿ ಬಾರ್ ನಲ್ಲಿದ್ದ. ಅಜ್ಜಿಯನ್ನು ಕೊಲೆಗೈದು ದರೋಡೆ ಮಾಡಿದ ದುಡ್ಡಲ್ಲಿ ಮಜಾ ಮಾಡುತ್ತಿದ್ದ ವೇಳೆ ಪೆÇಲೀಸರು ಆತನನ್ನು ಬಂಧಿಸಿ, ಕಿವಿಯೋಲೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಪೆÇಲೀಸರು ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
