ಮುಲ್ಕಿ: ರಾಷ್ಟ್ರೀಯ ಹೆದ್ದಾರಿ, 66ರ ಮುಲ್ಕಿ ಸಮೀಪದ ಬಪ್ಪನಾಡು ಬಳಿ ಬಂಕರ್ ಲಾರಿಯ ಚಕ್ರ ಹರಿದು ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿದ್ದಾನೆ
ಮೃತ ಸವಾರನನ್ನು ದಾವಣಗೆರೆ ಅಸಗೋಡು ಬಳಿಯ ನಿವಾಸಿ ಪ್ರಭು ಲಿಂಗ ಜಿ (32) ಎಂದು ಗುರುತಿಸಲಾಗಿದೆ
ಮೃತ ಬೈಕ್ ಸವಾರ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದು ಮಂಗಳೂರಿನಿಂದ ಉಡುಪಿ ಕಡೆಗೆ ಕೆಲಸದ ನಿಮಿತ್ತ ಹೋಗುತ್ತಿರುವಾಗ ರಾಷ್ಟ್ರೀಯ ಹೆದ್ದಾರಿ ಬಪ್ಪನಾಡು ಜಂಕ್ಷನ್ ಬಳಿ ಅಪಘಾತ ತಡೆಗೆ ಇರಿಸಿದ್ದ ಬ್ಯಾರಿಕೇಡ್ ಒಳಭಾಗದಲ್ಲಿ ಬೈಕ್ ನುಗ್ಗಿಸಿದಾಗ ಸವಾರನ ನಿಯಂತ್ರಣ ತಪ್ಪಿ ಹೆದ್ದಾರಿ ದಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದು ಬೈಕಂಪಾಡಿ ಯಿಂದ ಪಡುಬಿದ್ರಿ ಕಡೆಗೆ ಹೋಗುತ್ತಿದ್ದ ಬಂಕರ್ ಲಾರಿಯ ಹಿಂದಿನ ಭಾಗದ ಚಕ್ರದ ಅಡಿಗೆ ಬಿದ್ದು ಸಾವನ್ನಪ್ಪಿದ್ದಾನೆ
ಅಪಘಾತದ ತೀವ್ರತೆಗೆ ಸವಾರನ ತಲೆ ಹೆಲ್ಮೆಟ್ ಸಮೇತ ಬಂಕರ್ ಲಾರಿಯ ಹಿಂದುಗಡೆ ಟಯರ್ ನ ಅಡಿಗೆ ಬಿದ್ದು ಚಿಪ್ಪರ್ ಚೂರಾಗಿದ್ದು ಅಪಘಾತದ ಭೀಕರ ದೃಶ್ಯ ಕರುಳು ಹಿಂಡುವಂತಿತ್ತು
ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತ ಉಂಟಾಗಿದ್ದು ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ . ಸ್ಥಳದಿಂದ ಅಪಘಾತಕ್ಕೀಡಾದ ಯುವಕನ ಶವ ಹಾಗೂ ವಾಹನಗಳನ್ನು ತೆರವುಗೊಳಿಸಿದ್ದು ಬಂಕರ್ ಲಾರಿ ಚಾಲಕ ಬಾದಾಮಿ ನಿವಾಸಿ ಭೀಮಣ್ಣ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಗೊಂಡ ಬಳಿಕ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಪ್ಪನಾಡು ಜಂಕ್ಷನ್, ಮುಲ್ಕಿ ಬಸ್ ನಿಲ್ದಾಣ, ವಿಜಯ ಸನ್ನಿಧಿ ರಾಶಿ ಹೆದ್ದಾರಿ ಬಳಿ ಅನೇಕ ಅಪಘಾತಗಳು ಸಂಭವಿಸಿದ್ದು ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಭಾಗದಲ್ಲಿ ಸರ್ವಿಸ್ ರಸ್ತೆ ಕಾಮಗಾರಿ ಕೂಡ ಅರ್ಧದಲ್ಲಿ ನಿಂತು ಹೋಗಿದ್ದು ಪ್ರಯಾಣಿಕರು ಹಾಗೂ ಸಣ್ಣಪುಟ್ಟ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ ಎಂದು ಸ್ಥಳೀಯ ಆಟೋ ಚಾಲಕ ಮೋಹನ್ ಕುಬೆವೂರು ಹೆದ್ದಾರಿ ಇಲಾಖೆ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ


