ಬಿಲ್ಲವ ಸಮಾಜದ ದಾರಿ ತಪ್ಪಿಸುತ್ತಿರುವ ಸರ್ಕಾರ

ಸರ್ಕಾರ ಸ್ಥಾಪಿಸಿದ ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ಕೋಶಕ್ಕೆ ಬಿಲ್ಲವ ಸಮಾಜ ವಿರೋಧ ವ್ಯಕ್ತಪಡಿಸಿ ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮವೇ ಬೇಕು ಎಂದು ಆಗ್ರಹಿಸಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಕಳೆದ ಜ.5ರಂದು ಸಚಿವ ಸುನೀಲ್‌ಕುಮಾರ್ ನೇತೃತ್ವದಲ್ಲಿ ಬಿಲ್ಲವರ ನಿಯೋಗ ಕೋಶದ ಬದಲು ನಿಗಮ ಸ್ಥಾಪನೆ ಮಾಡಬೇಕು ಎಂದು ಮುಖ್ಯಮಂತ್ರಿಗೆ ಮನವಿಯನ್ನು ಸಲ್ಲಿಸಿತ್ತು. ಈ ಸಂದರ್ಭ ನಾರಾಯಣಗುರು ಅಭಿವೃದ್ಧಿ ಕೋಶಕ್ಕೆ ವಿರೋಧ ಇರುವುದು ಸರ್ಕಾರಕ್ಕೆ ಮನವರಿಕೆಯಾಗಿದ್ದು, ಕೋಶವನ್ನು ಹಿಂಪಡೆದು ಅಭಿವೃದ್ಧಿ ನಿಗಮವನ್ನಾಗಿ ಪರಿವರ್ತಿಸುವುದಾಗಿ ಭರವಸೆಯನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನೀಡಿದ್ದರು. ಆದರೆ ಜ.6ರಂದು ನಾರಾಯಣಗುರು ಅಭಿವೃದ್ಧಿ ಕೋಶಕ್ಕೆ 10 ಕೋಟಿ ರೂಪಾಯಿ ಬಿಡುಗಡೆಗೊಳಿಸಿ ಆದೇಶ ಹೊರಡಿಸುವ ಮೂಲಕ ಸಮಾಜದ ದಾರಿ ತಪ್ಪಿಸುವ ಕಾರ್ಯ ನಡೆಸಿದೆ. ಬಿಲ್ಲವ ಈಡಿಗ ನಿಗಮದ ಬಗ್ಗೆ ತಮ್ಮ ನಿಲುವು ಏನು ಎಂಬುದನ್ನು ಕೂಡಲೇ ಸರ್ಕಾರ ಸ್ಪಷ್ಟಪಡಿಸಲಿ. ಯಾಕೆ ಪದೇ ಪದೇ ಗೊಂದಲ ಸೃಷ್ಟಿಸುತ್ತೀರಿ?
ಸುಮಾರು 26 ಪಂಗಡಗಳನ್ನು ಒಳಗೊಂಡ ಬಿಲ್ಲವ ಈಡಿಗ ಸಮಾಜಕ್ಕೆ ಪತ್ಯೇಕ ನಿಗಮ ಸ್ಥಾಪನೆ ಮಾಡಬೇಕು ಎಂದು ಈ ಹಿಂದಿನಿಂದಲೂ ಆಗ್ರಹಿಸುತ್ತಾ ಬರಲಾಗಿತ್ತು. ಆದರೆ ಬೇರೆ ಬೇರೆ ಕಾರಣ ಹೇಳಿ ಸರ್ಕಾರ ನಿಗಮ ಸ್ಥಾಪನೆಯನ್ನು ಮುಂದೂಡುತ್ತಲೇ ಬರುತ್ತಿತ್ತು. ಇದರ ಮಧ್ಯದಲ್ಲಿ ಬಿಲ್ಲವ ಅಭಿವೃದ್ಧಿ ಕೋಶ ಸ್ಥಾಪನೆ ಮಾಡಿ ಆದೇಶ ಹೊರಡಿಸಿತ್ತು. ಈ ಜೀವವಿಲ್ಲದ ಕೋಶ ಮತ್ತು ನಿಗಮಕ್ಕೆ ಅಜಗಜಾಂತರ ವ್ಯತ್ಯಾಸ ಇರುವುದರಿಂದ ಅಂದೇ ಈ ಕೋಶಕ್ಕೆ ಸಮಾಜ ವಿರೋಧ ವ್ಯಕ್ತಪಡಿಸಿತ್ತು.

ಕೋಶ ದೊಡ್ಡ ಮೋಸ ಇದರಲ್ಲಿ ಏನು ಕೂಡ ಇಲ್ಲ. ಬಿಲ್ಲವ ಈಡಿಗರ ಅಭಿವೃದ್ಧಿಗೆ ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪಿಸಿ ಇದಕ್ಕೆ 5೦೦ ಕೋಟಿ ಮೀಸಲಿಡಿ ಎಂಬ ಸಮಾಜದ ಬೇಡಿಕೆಗೆ ಸ್ಪಂದಿಸುವ ಬದಲು ಬಿಲ್ಲವ ಸಮಾಜದಲ್ಲಿ ಒಡಕು ಉಂಟುಮಾಡುವ ರಾಜಕೀಯ ಕಾರ್ಯತಂತ್ರದ ಭಾಗವಾಗಿ ಕಳೆದ ಜ.5ರಂದು ಆಯ್ದ ಕೆಲವರನ್ನು ಬೆಂಗಳೂರಿಗೆ ಕರೆಸಿ ಬ್ರಹ್ಮಶ್ರೀ ನಾರಾಯಣಗುರು ನಿಗಮ ಘೋಷಣೆ ಇದೆ ಎಂದು ಹೇಳಿ ದಾರಿ ತಪ್ಪಿಸಲಾಗಿತ್ತು. ಕೆಲವರು ಸಂಭ್ರಮ ಪಟ್ಟು ಬ್ರಹ್ಮಶ್ರೀ ನಾರಾಯಣಗುರು ನಿಗಮ ಆಯಿತು ಎಂಬ ರಾಜಕಾರಣಿಗಳ ಪೊಳ್ಳು ಭರವಸೆಗೆ ಅಭಿನಂದನೆಯನ್ನೂ ಸಲ್ಲಿಸಿಯಾಗಿತ್ತು. ಇದೀಗ ಅದರ ಬೆನ್ನಲ್ಲೇ ಜ.6ರಂದು ಸರ್ಕಾರ ಬಿಲ್ಲವ ಅಭಿವೃದ್ಧಿ ಕೋಶಕ್ಕೆ 10 ಕೋಟಿ ರೂಪಾಯಿ ಬಿಡುಗಡೆ ಮಾಡಿ ಸರ್ಕಾರ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ. ಇದರ ಅರ್ಥ ಏನು? ಅನಗತ್ಯ ಗೊಂದಲ ಸೃಷ್ಟಿಸುವುದರ ಉದ್ದೇಶವಾದರೂ ಏನು? ಆದ್ದರಿಂದ ಸರ್ಕಾರಕ್ಕೆ ನಿಗಮ ಸ್ಥಾಪನೆ ಮಾಡಲು ಸಾಧ್ಯ ಇಲ್ಲದಿದ್ದರೆ ಇಲ್ಲ ಎಂದು ನೇರವಾಗಿ ತಿಳಿಸಲಿ. ಅದು ಬಿಟ್ಟು ಬೋಗಸ್ ಭರವಸೆ ನೀಡುತ್ತಾ ಬರುತ್ತಿರುವುದು ಖಂಡನಾರ್ಹ.
ಮಾತ್ರವಲ್ಲದೆ ಸರ್ಕಾರದ ನಿಲುವು ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದೆ ಅಭಿನಂದನೆ ಸಲ್ಲಿಸಿರುವುದೂ ಕೂಡ ಖೇದಕರ. ನಾಯಕರು ಎನಿಸಿಕೊಂಡವರನ್ನು ಸಮಾಜ ಅನುಸರಿಸಿಕೊಂಡು ಹೋಗುತ್ತದೆ. ಅವರ ಮೇಲೆ ಅತಿಯಾದ ವಿಶ್ವಾಸವನ್ನು ಇಟ್ಟುಕೊಂಡಿರುತ್ತಾರೆ. ಆದ್ದರಿಂದ ಯಾವುದೇ ಸ್ಪಷ್ಟತೆ ಇಲ್ಲದೆ ಗಡಿಬಿಡಿಯಲ್ಲಿ ಸರ್ಕಾರದ ನಿಲುವನ್ನು ಸ್ವಾಗತಿಸಿ ದ್ವಂದ್ವ ನಿಲುವು ಪ್ರಕಟಿಸಿದರೆ ಸಮಾಜದ ದಾರಿ ತಪ್ಪಿದಂತೆಯೂ ಆಗುತ್ತದೆ. ಈ ಹಿಂದೆ ಸಮಾಜ ನಡೆಸಿದ ಹೋರಾಟಕ್ಕೂ ಯಾವುದೇ ಮಾನ್ಯತೆ ಇಲ್ಲದಂತಾಗುತ್ತದೆ.
