ಮಂಜೇಶ್ವರ: ಸೀತಾಂಗೋಳಿ ಪೇಟೆಯ ನಿರ್ಜನ ಪ್ರದೇಶದ ಕಟ್ಟಡವೊಂದರ ಹಿಂಬದಿಯಲ್ಲಿ ಯುವಕನೊಬ್ಬನನ್ನು ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಅತಿ ಭೀಕರವಾಗಿ ಕೊಲೆಗೈದ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ.
ಮುಂಡಿತ್ತಡ್ಕ ಸಮೀಪದ ಪಾಡ್ಲಡ್ಕ ನಿವಾಸಿ, ಕೋಳಿ ಸಾಗಾಟದ ಲಾರಿ ಚಾಲಕ ಸಫಾಯತ್ (30) ಕೊಲೆಯಾದ ದುರ್ದೈವಿ. ಮಂಗಳವಾರ ಮಧ್ಯಾಹ್ನದ ವೇಳೆಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಕುಂಬಳೆ ಪೊಲೀಸರು ಹತ್ಯೆಗೆ ಬಳಸಲಾದ ಮಾರಕಾಯುಧಗಳನ್ನು ವಶಪಡಿಸಿಕೊಂಡಿದ್ದಾರೆ.
ಸಫಾಯತ್ನನ್ನು ಉದ್ದೇಶಪೂರ್ವಕವಾಗಿ ಜನರಿಲ್ಲದ ಜಾಗಕ್ಕೆ ಕರೆದೊಯ್ದು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪ್ರಸ್ತುತ ಮೃತದೇಹವನ್ನು ಕುಂಬಳೆ ಸಹಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಪೊಲೀಸರು ಪರಿಸರದ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಸಾವನ್ನಪ್ಪಿದ ವ್ಯಕ್ತಿಯ ಸ್ನೇಹಿತರ ವಲಯವನ್ನು ಕೇಂದ್ರೀಕರಿಸಿ ತನಿಖೆ ತೀವ್ರಗೊಳಿಸಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡವು ಕಾರ್ಯಾಚರಣೆ ಆರಂಭಿಸಿದೆ.
