ಕಸ್ತೂರಿ ರಂಗನ್ ವರದಿ ರದ್ದುಪಡಿಸಲು ಕ್ರಮ ಕೈಗೊಳ್ಳಿ : ಮಾಜಿ ಸಚಿವ ರಮಾನಾಥ ರೈ
ರಾಜ್ಯ ಸರಕಾರ ಕಸ್ತೂರಿ ರಂಗನ್ ವರದಿಗೆ ವಿರೋಧ ಇದೆ ಎಂದು ಹೇಳಿಕೆ ನೀಡಿ ರಾಜಕೀಯ ಲಾಭ ಪಡೆಯುವ ಪ್ರಯತ್ನ ಮಾಡುವುದು ಬೇಡ. ಅದನ್ನು ರದ್ದುಪಡಿಸುವ ಬಗ್ಗೆ ಕ್ರಮ ವಹಿಸಲಿ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಒತ್ತಾಯಿಸಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ಇನ್ನೂ ರದ್ದಾಗಿಲ್ಲ. ಆ ಸಮಸ್ಯೆ ಇನ್ನೂ ಜೀವಂತ ಇದೆ. ಕಸ್ತೂರಿ ರಂಗನ್ ವರದಿ ಜಾರಿ ಬೇಡ ಎಂದು ಆಕ್ಷೇಪವನ್ನು ಕೇಂದ್ರಕ್ಕೆ ರಾಜ್ಯ ಸರಕಾರ ಕಳುಹಿಸಿದೆ. ಅದನ್ನು ಜಾರಿಗೊಳಿಸುವ ಪ್ರಯತ್ನ ಮಾಡಲಿ ಎಂದು ಅವರು ತಾಕೀತು ಮಾಡಿದರು.
ಇದೀಗ ರಾಜ್ಯ ಸರಕಾರ ಕಸ್ತೂರಿ ರಂಗನ್ ವರದಿಗೆ ವಿರೋಧ ಇದೆ ಎಂದು ಪತ್ರಿಕೆಗಳಲ್ಲಿ ಹೇಳಿಕೆ ನೀಡಿರುವುದನ್ನು ನೋಡಿದ್ದೇನೆ. ಅದನ್ನು ಜಾರಿ ಮಾಡುವುದು ಕೇಂದ್ರ ಸರಕಾರ. ರಾಜ್ಯದಲ್ಲಿ ನಮ್ಮ ಸರಕಾರ ಇದ್ದಾಗ ಈ ಬಗ್ಗೆ ವಿವಿಧ ಕಡೆ ಪ್ರತಿಭಟನೆ, ಹೋರಾಟ ನಡೆಸಿದ್ದ ಬಿಜೆಪಿ, ಇಂದು ಡಬ್ಬಲ್ ಇಂಜಿನ್ ಸರಕಾರ ಇರುವಾಗ ಅದನ್ನು ರದ್ದುಪಡಿಸಲು ಕ್ರಮ ವಹಿಸುವುದು ಬಿಟ್ಟು ವಿರೋಧ ಎಂದು ಹೇಳುವುದು ರಾಜಕೀಯ ಪ್ರೇರಿತ ಎಂದು ರಮಾನಾಥ ರೈ ಹೇಳಿದರು.
ಎತ್ತಿನಹೊಳೆ ಯೋಜನೆ ಜಾರಿಗೆ ತಂದಾಗ ಪ್ರತಿಭಟನೆ, ಪಾದಯಾತ್ರೆ ಮಾಡಿದ್ದ ಸಂಸದ ನಳಿನ್ ಕುಮಾರ್ ಕಟೀಲು ಇದೀಗ ಹಾಸನ, ಕೋಲಾರದಲ್ಲಿ ಭಾಗದಲ್ಲಿ ಅದನ್ನು ನಾವೇ ಮಾಡಿದ್ದು ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಕಸ್ತೂರಿ ರಂಗನ್ ವರದಿ ಕೂಡಾ ಇನ್ನೂ ಕರಡು ಅಧಿಸೂಚನೆಯ ಹಂತದಲ್ಲಿದ್ದು, ಇದು ಜೀವಂತವಾಗಿದ್ದು, ಎಂದಿಗೂ ತೂಗುಗತ್ತಿಯಾಗಿದೆ. ಬಿಜೆಪಿ ತನ್ನ ಹಿಂದಿನ ಚುನಾವಣೆಯ ಪ್ರಣಾಳಿಕೆಯಲ್ಲಿಯೂ ಕಸ್ತೂರಿ ರಂಗನ್ ವರದಿ ರದ್ದುಪಡಿಸುವುದಾಗಿ ಹೇಳಿಕೊಂಡಿತ್ತು. ಆದರೆ ಐದು ವರ್ಷವಾದರೂ ಆಗಿಲ್ಲ.
ಎತ್ತಿನ ಹೊಳೆ ವಿಚಾರದಲ್ಲಿಯೂ ನಾನು ಎಂದೂ ಹಿಪಾಕ್ರಸಿ ಪಾಲಿಟಿಕ್ಸ್ ಮಾಡಿಲ್ಲ. ಎತ್ತಿನಹೊಳೆ ಯೋಜನೆಯಿಂದ ಜಿಲ್ಲೆಯ ಜನರಿಗೆ ತೊಂದರೆ ಆದರೆ ಪಶ್ಚಿಮ ವಾಹಿನಿ ಯೋಜನೆಗಾಗಿ ಸುಮಾರು 60 ಮಂದಿಯ ರೈತರ ನಿಯೋಗವನ್ನು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯರ ಬಳಿ ಕರೆದೊಯ್ದು, ಬಜೆಟ್‍ನಲ್ಲಿ ಹಣ ಮಂಜೂರು ಮಾಡಲಾಗಿತ್ತು. ಬಳಿಕ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಕಳೆದ ವರ್ಷ ಮತ್ತು ಈ ವರ್ಷ ಬಜೆಟ್‍ನಲ್ಲಿ ಹಣ ಬಿಡುಗಡೆ ಮಾಡಿದ್ದಾರೆ. ಅಂದು ಎತ್ತಿನಹೊಳೆ ವಿರುದ್ಧ ಪಾದಯಾತ್ರೆ ಮಾಡಿ ಇಂದು ಎತ್ತಿನ ಹೊಳೆ ಯೋಜನೆಗಾಗಿ ಕರಸೇವೆ ರೀತಿ ಚಳವಳಿ ಮಾಡುವುದಾಗಿ ಹೇಳುತ್ತಿರುವುದು ಚುನಾವಣೆ ಹತ್ತಿರ ಬಂದಾಗ ಬಿಜೆಪಿಯವರು ನಡೆಸುತ್ತಿರುವ ಕುತಂತ್ರ ಎಂದು ರಮಾನಾಥ ರೈ ಆಕ್ಷೇಪಿಸಿದರು. ಗೋಷ್ಠಿಯಲ್ಲಿ ಶಶಿಧರ ಹೆಗ್ಡೆ, ಶಾಲೆಟ್ ಪಿಂಟೋ, ಶಾಹುಲ್ ಹಮೀದ್, ಅಪ್ಪಿ, ಗಣೇಶ್ ಪೂಜಾರಿ, ಉಮೇಶ್ ದಂಡಕೇರಿ, ಜಯಶೀಲ ಅಡ್ಯಂತಾಯ, ಬಿ.ಎಲ್. ಪದ್ಮನಾಭ, ಶಬೀರ್, ನಝೀರ್ ಉಪಸ್ಥಿತರಿದ್ದರು.