ದ.ಕ. ಜಿಲ್ಲೆಯನ್ನು ಆಹಾರ ಸಂಸ್ಕರಣಾ ಹಬ್‌ ಮಾಡಿ: ಕೇಂದ್ರ ಸಚಿವ ಚಿರಾಗ್‌ ಪಾಸ್ವಾನ್‌ಗೆ ಸಂಸದ ಕ್ಯಾ. ಚೌಟ ಮನವಿ

ಮಂಗಳೂರು: ಅಡಿಕೆ, ತೆಂಗು ಸೇರಿ ಹೆಚ್ಚಿನ ತೋಟಗಾರಿಕಾ ಉತ್ಪನ್ನ ಬೆಳೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಾಧುನಿಕ ಆಹಾರ ಸಂಸ್ಕರಣಾ ತಂತ್ರಜ್ಞಾನ ಅಳವಡಿಕೆಗೆ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣೆ(NIFTEM) ಸಂಸ್ಥೆಯ ಕೇಂದ್ರ ಸ್ಥಾಪಿಸಬೇಕೆಂದು ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಚಿರಾಗ್‌ ಪಾಸ್ವಾನ್‌ ಅವರಲ್ಲಿ ಮನವಿ ಮಾಡಿದ್ದಾರೆ.

ಸಚಿವ ಚಿರಾಗ್‌ ಅವರನ್ನು ಇಂದು ನವದೆಹಲಿಯಲ್ಲಿ ಭೇಟಿ ಮಾಡಿದ ಅವರು, ದಕ್ಷಿಣ ಕನ್ನಡದಲ್ಲಿ ಆಹಾರ ಸಂಸ್ಕರಣಾ ಉದ್ಯಮ ಸ್ಥಾಪನೆಗೆ ಪೂರಕವಾಗಿರುವ ಅವಕಾಶ ಹಾಗೂ ಇಕೋ-ಸಿಸ್ಟಮ್‌ ಅಳವಡಿಕೆ ಕುರಿತು ಚರ್ಚಿಸಿ ಸಾಧ್ಯಾ-ಸಾಧ್ಯತೆಗಳ ಬಗ್ಗೆ ಮನವಿ ಸಲ್ಲಿಸಿದ್ದಾರೆ.

ಜಿಲ್ಲೆಯಲ್ಲಿ ಅಡಿಕೆ, ತೆಂಗು ಸೇರಿ ಹಲವಾರು ತೋಟಗಾರಿಕಾ ಬೆಳೆಗಳಿವೆ. ಈ ಹಿನ್ನಲೆ ಜಿಲ್ಲೆಯಲ್ಲಿ NIFTEM ಸಂಯೋಜಿತ ಸೆಂಟರ್‌ ಸ್ಥಾಪಿಸುವುದರಿಂದ ಆಹಾರ ಸಂಸ್ಕರಣಾ ತಂತ್ರಜ್ಞಾನಗಳ ಬಗ್ಗೆ ಇಲ್ಲಿನ ರೈತರು ಹಾಗೂ ಉದ್ದಿಮೆದಾರರಿಗೆ ಮಾಹಿತಿ, ಕೌಶಲ್ಯ ಅಭಿವೃದ್ಧಿಗೆ ಅನುಕೂಲವಾಗಲಿದೆ. ಜತೆಗೆ, ಸ್ಥಳೀಯ ಈ ವಲಯದ ಉದ್ದಿಮೆದಾರರು, ಮೀನು ಸಂಸ್ಕರಣಾ ವಲಯದವರು ಹಾಗೂ ರೈತರಿಗೆ NIFTEM ಸಹಯೋಗದಲ್ಲಿ ಅಗತ್ಯ ಮಾಹಿತಿ ವಿನಿಮಯ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಕೃಷಿ ಸಂಸ್ಕರಣಾ ಇನ್‌ಕ್ಯುಬೇಷನ್‌ ಸೆಂಟರ್‌ ಸ್ಥಾಪಿಸಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಳೀಯ ಕೃಷಿ ಉತ್ಪನ್ನಗಳ ಸಂಸ್ಕರಣೆಗಳಿಗೆ ಅನುಕೂಲವಾಗುವಂತೆ ಆಗ್ರೋ ಪ್ರೊಸೆಸಿಂಗ್‌ ಇನ್‌ಕ್ಯುಬೇಷನ್‌ ಸೆಂಟರ್‌ ಸ್ಥಾಪಿಸಬೇಕು. ಇದರಿಂದ ಆಗ್ರೋ ಉದ್ಯಮಶೀಲನೆ ಬೆಳೆಸುವ ಜತೆಗೆ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಬಹುದು. ಜತೆಗೆ, ಕೋಲ್ಡ್‌ ಚೈನ್‌ ಲಾಜಿಸ್ಟಿಕ್ಸ್‌, ಕೌಶಲ್ಯಾಧಾರಿತ ಕಾರ್ಮಿಕರ ಕೊರತೆ ಸೇರಿ ಆಹಾರ ಸಂಸ್ಕರಣಾ ಉದ್ಯಮ ವಲಯ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೂ ಅಗತ್ಯ ಕ್ರಮ ಕೈಗೊಳ್ಳಬೇಕು. ಆ ಮೂಲಕ ದಕ್ಷಿಣ ಕನ್ನಡವನ್ನು ಆಹಾರ ಸಂಸ್ಕರಣಾ ಹಬ್‌ ಆಗಿ ಪರಿವರ್ತಿಸಿ ಇಲ್ಲಿನ ರೈತರ ಆದಾಯ ಹೆಚ್ಚಿಸುವ ಜತೆ ವಿಪುಲ ಉದ್ಯೋಗಾವಕಾಶ ಸೃಷ್ಟಿಸಬೇಕೆಂದು ಕ್ಯಾ. ಚೌಟ ಅವರು ಸಚಿವರಿಗೆ ನೀಡಿದ ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.

Add - Clair veda ayur clinic

Related Posts

Leave a Reply

Your email address will not be published.