ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಹೆಚ್ಚುವರಿ ಪಿಂಚಣಿ ಅನುಷ್ಠಾನ ವಿಳಂಬ ಸಮಸ್ಯೆ: ತುರ್ತು ಸ್ಪಂದಿಸುವಂತೆ ದ.ಕ. ಸಂಸದ ಕ್ಯಾ. ಚೌಟ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಲ್ಲಿ ಮನವಿ

ಮಂಗಳೂರು: ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ನಿವೃತ್ತ ಉದ್ಯೋಗಿಗಳ ಹೆಚ್ಚುವರಿ ಪಿಂಚಣಿ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವ ಸಮಸ್ಯೆಗೆ ತುರ್ತು ಸ್ಪಂದಿಸಿ ಅದನ್ನು ಬಗೆಹರಿಸುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಕಾರ್ಮಿಕ ಹಾಗೂ ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಲ್ಲಿ ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ಇಂದು ಕ್ಯಾ. ಚೌಟ ಅವರು, ಸಚಿವರನ್ನು ಭೇಟಿ ಮಾಡಿ ಮನವಿ ನೀಡಿದ್ದು, ರಾಜ್ಯದಲ್ಲಿ ನಿವೃತ್ತ ಕೆಎಸ್‌ಆರ್‌ಟಿಸಿ ನೌಕರರ ಹೆಚ್ಚುವರಿ ಪಿಂಚಣಿ ಅನುಷ್ಠಾನ ವಿಳಂಬದಿಂದ ಅರ್ಹ ಫಲಾನುಭವಿಗಳು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಮನವರಿಕೆ ಮಾಡಿದ್ದಾರೆ.

2014ರ ಸೆ.1ರ ನಂತರ 58 ವರ್ಷ ಪೂರ್ಣಗೊಳಿಸಿ ನಂತರ ನಿವೃತ್ತರಾದ ವಿನಾಯಿತಿ ಮತ್ತು ವಿನಾಯಿತಿ ಇಲ್ಲದ ಸಂಸ್ಥೆಗಳ ನೌಕರರು ಕೂಡ ಇತರ ನೌಕರರಂತೆ ಹೆಚ್ಚುವರಿ ಪಿಂಚಣಿ ಪಡೆಯುವುದಕ್ಕೆ ಅರ್ಹರು ಎಂಬುದಾಗಿ ಸುಪ್ರೀಂಕೋರ್ಟ್‌ ಈಗಾಗಲೇ ತೀರ್ಪು ನೀಡಿದೆ. ಆದರೆ, ಈ ಸಂಬಂಧ ಈಗಾಗಲೇ ಅರ್ಜಿ ಸಲ್ಲಿಸಿರುವ ನಿವೃತ್ತ ಕೆಎಸ್‌ಆರ್‌ಟಿಸಿ ಉದ್ಯೋಗಿಗಳಿಗೆ ಹೆಚ್ಚುವರಿ ಪಿಂಚಣಿ ನೀಡುವ ಅನುಷ್ಠಾನ ಪ್ರಕ್ರಿಯೆಯು ವಿಳಂಬವಾಗುತ್ತಿದೆ. ಇದರಿಂದ ಸಂಸ್ಥೆಯ ನಿವೃತ್ತ ಉದ್ಯೋಗಿಗಳು ಪಿಂಚಣಿ ಕೊಡುಗೆ ಮೊತ್ತದಲ್ಲಿನ ವ್ಯತ್ಯಾಸದ ಮೇಲೆ ಬಡ್ಡಿಯನ್ನು ಪಾವತಿಸುವ ಮೂಲಕ ಆರ್ಥಿಕ ಹೊರೆ ಎದುರಿಸುತ್ತಿದ್ದಾರೆ. ದಕ್ಷಿಣ ಕನ್ನಡ ಕ್ಷೇತ್ರವೊಂದರಲ್ಲೇ ಸುಮಾರು 600ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ದೇಶದೆಲ್ಲೆಡೆ ಬೇರೆ ಸರ್ಕಾರಿ ಸ್ವಾಮ್ಯದಲ್ಲಿನ ಅಸಂಖ್ಯ ನಿವೃತ್ತ ನೌಕರರು ಕೂಡ ಈ ಹೆಚ್ಚುವರಿ ಪಿಂಚಣಿ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಂಸದ ಕ್ಯಾ. ಚೌಟ ಅವರು ಕಾರ್ಮಿಕ ಸಚಿವರ ಗಮನಕ್ಕೆ ತಂದಿದ್ದಾರೆ.

ಈ ಹಿನ್ನಲೆಯಲ್ಲಿ ಕೂಡಲೇ ಸುಪ್ರೀಂಕೋರ್ಟ್‌ ಆದೇಶದಂತೆ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಹೆಚ್ಚುವರಿ ಪಿಂಚಣಿ ಮಂಜೂರು ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವ ಸಂಬಂಧ ಕೇಂದ್ರ ಭವಿಷ್ಯ ನಿಧಿ ಆಯುಕ್ತರಿಗೆ ಸೂಕ್ತ ಸೂಚನೆ ನೀಡಬೇಕು. ಆ ಮೂಲಕ ಈ ಸಮಸ್ಯೆಗೆ ತುರ್ತು ಕ್ರಮ ಕೈಗೊಂಡರೆ ಅರ್ಹ ನಿವೃತ್ತ ಪಿಂಚಣಿದಾರರು ಹೆಚ್ಚುವರಿ ಪಿಂಚಣಿ ಅನುಕೂಲಗಳನ್ನು ಪಡೆಯುವ ಜತೆಗೆ ಸದ್ಯ ಎದುರಿಸುತ್ತಿರುವ ಸಂಕಷ್ಟದಿಂದ ಮುಕ್ತಿ ಪಡೆಯಬಹುದು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.


Add - Clair veda ayur clinic

Related Posts

Leave a Reply

Your email address will not be published.