ಮಂಗಳೂರು : ದಸರಾ ಕವಿಗೋಷ್ಠಿಯಲ್ಲಿ ಮೊಳಗಿದ ಬಹು ಭಾಷಿಕತೆ

ಮಂಗಳೂರಿನ ತುಳು ಪರಿಷತ್ ,ಮಯೂರಿ ಫೌಂಡೇಷನ್ ಮತ್ತು ಕರ್ನಾಟಕ ಥಿಯಾಲಾಜಿಕಲ್ ಕಾಲೇಜು, ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಹಾಗೂ ಸಾಮರಸ್ಯ ಮಂಗಳೂರು ಇವರ ಸಹಭಾಗಿತ್ವದಲ್ಲಿ ದಸರಾ ಬಹು ಭಾಷಾ ಕವಿಗೋಷ್ಠಿ ಮಂಗಳೂರಿನ ಬಲ್ಮಠದ ಸಹೋದಯದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಯೂರಿ ಫೌಂಡೇಶನ್‍ನ ಅಧ್ಯಕ್ಷರು ಹಾಗೂ ಹಿರಿಯ ಕವಿ ಜಯ.ಕೆ.ಶೆಟ್ಟಿ ಅವರು ಉದ್ಘಾಟಿಸಿ ಮಾತನಾಡಿ, ದಸರಾ ಹಿನ್ನೆಲೆಯಲ್ಲಿ ತುಳುನಾಡಿನ ಎಲ್ಲಾ ಭಾಷಿಗರು ಒಂದೇ ವೇದಿಕೆಗೆ ಬರುವ ಮುಲಕ ತುಳುನಾಡಿನ ಸೌಹಾರ್ದ ಪರಂಪರೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ಹೇಳಿದರು

ದಸರಾ ಬಹು ಭಾಷಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಬಾಬು ಕೊರಗ ಪಾಂಗಾಳ ಅವರು ಕೊರಗ ಭಾಷೆಯಲ್ಲಿ ಕವಿತೆಯನ್ನು ಪ್ರಸ್ತುತ ಪಡಿಸಿದರು. ವಿಜಯ ಶೆಟ್ಟಿ ಸಾಲೆತ್ತೂರು ಮತ್ತು ಶಾರದ ಶೆಟ್ಟಿ ತುಳು ಭಾಷೆಯಲ್ಲಿ ಕವಿತೆಯನ್ನು ಪ್ರಸ್ತುತ ಪಡಿಸಿದರು, ರಾಧಕೃಷ್ಣ ಉಳಿಯತಡ್ಕ ಕಾಸರಗೋಡು ಮತ್ತು ರಾಜವರ್ಮ ವಿಟ್ಲ ಅವರು ಕನ್ನಡದಲ್ಲಿ ಕವಿತೆಯನ್ನು ಪ್ರಸ್ತುತ ಪಡಿಸಿದರು. ತಾರಾ ಲವಿನಾ ಗಂಜೀಮಠ ಮತ್ತು ವಿನೋದ್ ಪಿಂಟೋ ತಾಕೋಡೆ ಅವರು ಕೊಂಕಣಿ ಭಾಷೆಯ ಕವಿತೆ ವಾಚಿಸಿದರು.

ವೆಂಕಟೇಶ್ ನಾಯಕ್ ಜಿಎಸ್‍ಬಿ ಕೊಂಕಣಿಯ ಕವಿತೆ ವಾಚಿಸಿದರು. ಶಾಂತಾ ಕುಂಠಿನಿ ಮತ್ತು ಗೋಪಾಲಕೃಷ್ಣ ಶಾಸ್ತ್ರೀ ಹವ್ಯಕ ಕನ್ನಡ ಭಾಷೆಯಲ್ಲಿ ಕವಿತೆಯನ್ನು ವಾಚಿಸಿದರು. ಮಿಸ್ರಿಯಾ ಐ ಪಜೀರ್ ಅವರು ಬ್ಯಾರಿ ಭಾಷೆಯಲ್ಲಿ, ಪೂರ್ಣಿಮಾ ಕಮಲಶಿಲೆ ಅವರು ಕುಂದಾಪುರ ಕನ್ನಡದ, ಚಂದ್ರಹಾಸ್ ನಂಬಿಯಾರ್ ಎಂ ಕೆ ಕಾಸರಗೋಡು ಅವರು ಮಳಯಾಲಯಂ ಭಾಷೆಯಲ್ಲಿ ಕವಿತೆಯನ್ನು ವಾಚಿಸಿದರು. ಸೌಮ್ಯ ಗೋಪಾಲ್ ಅವರು ಶಿವಳ್ಳಿ ತುಳು ಭಾಷೆಯಲ್ಲಿ ಹಾಗೂ ಯೋಗಿಶ್ ಹೊಸೊಳಿಕೆ ಅವರು ಅರೆ ಭಾಷೆಯಲ್ಲಿ ಕವಿತೆಯನ್ನು ವಾಚಿಸಿದರು. ರತ್ನಾವತಿ ಬೈಕಾಡಿ ಮತ್ತು ಜಯಲಕ್ಷ್ಮೀ ಅಅವರು ಭಾವಗಾನ ಪ್ರಸ್ತುತ್ತ ಪಡಿಸಿದರು.

ಇದೇ ವೇಳೆ ಮುಲ್ಕಿ ಕಾರ್ನಾಡ್‍ನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ಅವರು ಕವಿತೆಗಳಲ್ಲಿ ಪ್ರಕಟಗೊಂಡ ಬಹುಭಾಷಿಕತೆಯ ಬಗ್ಗೆ ಮಾತನಾಡಿ, ಒಂದೇ ಭೌಗೋಳಿಕ ಪ್ರದೇಶದಲ್ಲಿ ಹಲವಾರು ಭಾಷೆಗಳು ಬಳಕೆಯಲ್ಲಿದ್ದರೆ ಅದನ್ನು ಬಹುಭಾಷಿಕ ಪ್ರದೇಶ ಎನ್ನುತ್ತಾರೆ. ನಮ್ಮ ಈ ತುಳುನಾಡು ಮತ್ತೆಲ್ಲಿಯೂ ಕಾಣದಷ್ಟು ಭಾಷೆಗಳನ್ನು ಹೊಂದಿದೆ.

ದಸರಾ, ಕೃಷಿ, ಪ್ರಕೃತಿ, ಬಡತನ, ದುಡಿಮೆ, ಅಸಮಾನತೆ ಹೀಗೆ ವಿವಿಧ ವಿಷಯಗಳನ್ನು ಒಳಗೊಂಡಿರುವ ಕವನಗಳಲ್ಲಿ ಬಹುಭಾಷಿಕತೆಯ ಸಮೃದ್ಧಿ ಎದ್ದು ಕಂಡಿತು. ಒಂದೇ ವಿಷಯಕ್ಕೆ ಹಲವಾರು ಪದಗಳು, ಮತ್ತು ಅವುಗಳ ಸಾಮ್ಯತೆ ಹಾಗೂ ವೈವಿದ್ಯತೆ ಈ ಕವನಗಳಲ್ಲಿ ವ್ಯಕ್ತಗೊಂಡಿತು ಎಂದು ಹೇಳಿದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಚೇಳ್ಯಾರು ಅವರು ಗೋಷ್ಠಿಯಲ್ಲಿ ವಾಚಿಸಲಾದ ಕವಿತೆಗಳ ಬಗ್ಗೆ ಪ್ರತಿಕ್ರಿಯೆ ನೀಡಿ, ಬಹುಭಾಷಿಕತೆ ,ಬಹು ಭಾಷೆಗಳೊಂದಿಗೆ ಬಹು ಸಮುದಾಯಗಳ ಕವಿಗಳು ಒಂದೇ ವೇದಿಕೆಯಲ್ಲಿ ತಮ್ಮ ಭಾವಗಳನ್ನು ಹಂಚಿಕೊಳ್ಳಲು ಸಾಧ್ಯ ಎಂಬುವುದಕ್ಕೆ ಈ ಗೋಷ್ಠಿ ಸಾಕ್ಷಿಯಾಯಿತು.

ಇಲ್ಲಿ ವಾಚಿಸಲಾದ ಕವನಗಳು ದಸರಾ, ನವರಾತ್ರಿ, ಮಾರ್ನೆಮಿ, ಮನ್ನಮಿಯಾಗಿ, ಪ್ರಸ್ತುತಗೊಂಡಿದಲ್ಲದೆ, ಒಂದೇ ವಿಷಯ ವಸ್ತುವನ್ನು ಒಳಗೊಂಡು ಇಷ್ಟು ಜನ ಕವಿಗಳು ಕವಿತೆ ರಚಿಸಿ ಭಿನ್ನ ವಿಭಿನ್ನ ಆಶಯಗಳನ್ನು ವ್ಯಕ್ತಪಡಿಸಿರುವುದು ಕವಿತೆಯ ಶಕ್ತಿ ಮತ್ತು ಅನನ್ಯತೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು, ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್. ಎಂ ವಾಟ್ಸನ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ಎ ಮಹಮ್ಮದ್ ಹನೀಫ್, ದ.ಕ ಜಿಲ್ಲಾ ಕೊರಗರ ಸಂಘದ ಅಧ್ಯಕ್ಷರಾದ ಸುಂದರ ಕೊರಗ, ತುಳು ಪರಿಷತ್ ಗೌರವಾಧ್ಯಕ್ಷರಾದ ಸ್ವರ್ಣ ಸುಂದರ್, ತುಳು ಪರಿಷತ್‍ನ ಗೌರವ ಸಲಹೆಗಾರರಾದ ಡಾ.ಪ್ರಭಾಕರ್ ನೀರ್‍ಮಾರ್ಗ, ಸಾಮರಸ್ಯ ಮಂಗಳೂರು ಅಧ್ಯಕ್ಷೆ ಮಂಜುಳಾ ವೈ ನಾಯಕ್ ಅವರು ಶುಭಕೋರಿ ಮಾತನಾಡಿದರು. ತುಳು ಪರಿಷತ್ ಕೋಶಾಧಿಕಾರಿ ಶುಭೋದಯ ಆಳ್ವ ಸ್ವಾಗತಿಸಿದರು. ತುಳು ಪರಿಷತ್ ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Related Posts

Leave a Reply

Your email address will not be published.