ಡಿವೈಎಫ್ಐ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯ ಸಭಾ ಸದಸ್ಯರಾದ ಎ.ಎ ರಹೀಮ್ ಮಂಗಳೂರಿಗೆ.

ಮಂಗಳೂರು ತಾಲೂಕಿನ ಹರೇಕಳ ಗ್ರಾಮದಲ್ಲಿ ಗೇಣಿದಾರ ರೈತರ, ಹೆಂಚು, ನೇಯ್ಗೆ, ಬೀಡಿ ಕಾರ್ಮಿಕರ ಹೋರಾಟದ ನೇತೃತ್ವ ವಹಿಸಿ ಕಮ್ಯೂನಿಸ್ಟ್‌ ಪಕ್ಷವನ್ನು ಮುನ್ನಡೆಸಿದ್ದ ಹಿರಿಯ ಸಂಗಾತಿ ಕಡೆಂಜ ಕಾಮಣ್ಣ ರೈಗಳ ಸ್ಮರಣಾರ್ಥವಾಗಿ ಹರೇಕಳದಲ್ಲಿ ಕಾಂ. ಕಾಮಣ್ಣ ರೈ ಭವನ ಡಿವೈಎಫ್ಐ ನವೀಕೃತ ಕಟ್ಟಡವು ನಿರ್ಮಾಣಗೊಳ್ಳುತ್ತಿದೆ. ಹರೇಕಳದಲ್ಲಿ ಡಿವೈಎಫ್ಐ 90 ರ ದಶಕದಲ್ಲಿ ಊರಿನ ಜನನಾಯಕ ಕಾಮ್ರೇಡ್ ಕಾಮಣ್ಣ ರೈ ನೆನಪಿನಲ್ಲಿ ಸ್ವಂತ ಕಟ್ಟಡವನ್ನು ಕಟ್ಟಿತು. ಈ ಕಟ್ಟಡ ನಂತರ ಗ್ರಾಮದ ಎಲ್ಲಾ ಜನಪರ ಹೋರಾಟಗಳ ಕೇಂದ್ರವಾಯಿತು. ಈಗ ಗ್ರಾಮದ ಹೊಸ ಪೀಳಿಗೆ ಡಿವೈಎಫ್ಐ ಸಂಘಟನೆಯಲ್ಲಿ ತೊಡಗಿಸಿಕೊಂಡಿದೆ. ಹೊಸಕಾಲದ ಅಗತ್ಯಗಳನ್ನು ಮನಗಂಡು ಹಳೆಯ ಕಟ್ಟಡದ ಜಾಗದಲ್ಲಿ ಹೊಸ ಕಟ್ಟಡ ಕಟ್ಟಲು ತೀರ್ಮಾನಿಸಿತು. ಗ್ರಾಮಸ್ಥರ ಪೂರ್ಣ ಬೆಂಬಲದಿಂದ ಅತ್ಯಂತ ತ್ವರಿತವಾಗಿ ಕಾಮಣ್ಣ ರೈ ನೆನಪಿನ ಭವನ ವಿಶಾಲವಾಗಿ ಎದ್ದು ನಿಂತಿದೆ. ಇದು ಮುಂದಿನ ದಿನಗಳಲ್ಲಿ ಗ್ರಾಮದ ವಿದ್ಯಾರ್ಥಿ, ಯುವಜನರನ್ನು ಆರೋಗ್ಯಕರವಾದ ವೈವಿಧ್ಯಮಯ ಚಟುವಟಿಕೆಗಳಲ್ಲಿ ತೊಡಗಿಸುವ ಮಾರ್ಗದರ್ಶನ ಕೇಂದ್ರವಾಗಿ, ಸರಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸುವ ಮಾಹಿತಿ ಕೇಂದ್ರವಾಗಿ ಕಾರ್ಯಾಚರಿಸಲಿದೆ.

ಡಿವೈಎಫ್ಐ ಕಾರ್ಯಕರ್ತರು ಗ್ರಾಮಸ್ಥರ ಸಂಪೂರ್ಣ ಬೆಂಬಲದಿಂದ ಹಗಲಿರುಳು ದುಡಿದು ನಿರ್ಮಿಸಿದ ಕಾಂ.‌ ಕಾಮಣ್ಣ ರೈ ಭವನದ ಉದ್ಘಾಟನೆಯನ್ನು ಫೆಬ್ರವರಿ 19 ರಂದು ಸಂಜೆ 4 ಗಂಟೆಗೆ ವಿಜೃಂಭಣೆಯಿಂದ ನಡೆಸಲು ನಿರ್ಧರಿಸಿದ್ದೇವೆ. ಡಿವೈಎಫ್ಐ ಅಖಿಲ ಭಾರತ ಅಧ್ಯಕ್ಷರು, ರಾಜ್ಯ ಸಭಾ ಸದಸ್ಯರು (MP) ಎ ಎ ರಹೀಂ ಕಟ್ಟಡ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಈ ವೇಳೆ ಡಿವೈಎಫ್ಐ ರಾಜ್ಯ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಕಾರ್ಮಿಕ ಮುಖಂಡರಾದ ಸುನೀಲ್ ಕುಮಾರ್ ಬಜಾಲ್, ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಕಾರ್ಯದರ್ಶಿ ಸಂತೋಷ್ ಬಜಾಲ್ ,ಪಾವೂರು ಗ್ರಾ.ಪ ಮಾಜಿ ಸದಸ್ಯರಾದ ವಿವೇಕ್ ರೈ, ಉದ್ಯಮಿ ಕಡೆಂಜ ಸುರಕ್ಷಿತ್ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಮಾವೇಶದ ಅಧ್ಯಕ್ಷತೆಯನ್ನು ಡಿವೈಎಫ್ಐ ಉಳ್ಳಾಲ ವಲಯದ ಅಧ್ಯಕ್ಷರಾದ ರಫೀಕ್ ಹರೇಕಳ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪದ್ಮಶ್ರೀ ವಿಜೇತ ಹರೇಕಳ ಹಾಜಬ್ಬ ಮತ್ತು ಹೈನುಗಾರಿಕೆಯ ಸಾಧಕಿ ಮೈಮುನಾ ಅಬ್ದುಲ್ ಮಜೀದ್ ರಾಜ್ ಕಮಲ್ ಅವರನ್ನು ಸನ್ಮಾನಿಸಲಿದ್ದೇವೆ. ಚುನಾವಣೆಯ ಸಿದ್ಧತೆಯಲ್ಲಿರುವ ಕರ್ನಾಟಕದಲ್ಲಿ DYFI ರಾಷ್ಟ್ರೀಯ ಅಧ್ಯಕ್ಷರ ಭೇಟಿ ಜಿಲ್ಲೆಯ ಯುವಜನರನ್ನು ಭಾಧಿಸುತ್ತಿರುವ ಉದ್ಯೋಗ, ಬಡತನ, ಮತ್ತು ಕೋಮುವಾದದಂತಹ ಸಮಸ್ಯೆಗಳು ಹಾಗೂ ಯುವಜನರ ಬದುಕಿನ ಬಗ್ಗೆ ಮಾತನಾಡಲಿರುವ ಎ. ಎ ರಹೀಮ್ ಅವರ ಆಗಮನ ಅತ್ಯಂತ ಮಹತ್ವ ಪಡೆದುಕೊಳ್ಳಲಿದೆ. ಉದ್ಘಾಟನೆ ಸಂದರ್ಭ ಎಲ್ಲಾ ವಿಭಾಗದ ಯುವಜನರನ್ನು ಒಳಗೊಂಡು ನಡೆಯುವ ಬೃಹತ್ ಸಾಮರಸ್ಯ ಸಮಾವೇಶ ಮತ್ತು ಉದ್ಘಾಟನೆ ಕಾರ್ಯಕ್ರಮದ ಪ್ರಯುಕ್ತ ನಡೆಯುವ ಹರೇಕಳ ಕಡವಿನ ಬಳಿಯಿಂದ ನಡೆಯುವ ಆಕರ್ಷಕ ಯುವಜನ ಮೆರವಣಿಗೆಯಲ್ಲಿ ಜಿಲ್ಲೆಯ ಯುವಜನತೆ ಭಾಗವಹಿಸಬೇಕೆಂದು ಡಿವೈಎಫ್ಐ ಉಳ್ಳಾಲ ವಲಯ ಕಾರ್ಯದರ್ಶಿ ಸುನೀಲ್ ತೇವುಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related Posts

Leave a Reply

Your email address will not be published.