ಪಡುಬಿದ್ರಿ: ರಾಷ್ಟ್ರೀಯ ಮಾನ್ಯತೆ ಪಡೆದ ಬ್ಲೂ ಪ್ಲ್ಯಾಗ್ ಬೀಚ್ ಸಂಪರ್ಕ ರಸ್ತೆ ಕಡಿತದ ಆತಂಕ: ಕಡಲು ಕೊರೆತಕ್ಕೆ ಸಂಪರ್ಕ ರಸ್ತೆ ಬಲಿಯಾಗಲು ಕ್ಷಣಗಣನೆ
ಪ್ರವಾಸಿಗರನ್ನು ತನ್ನತ್ತ ಸೆಳೆಯುವ ರಾಷ್ಟ್ರೀಯ ಮಾನ್ಯತೆ ಪಡೆದ ಪಡುಬಿದ್ರಿಯ ಬ್ಲೂ ಪ್ಲ್ಯಾಗ್ ಬೀಚ್ ಸಂಪರ್ಕ ರಸ್ತೆ ಕಡಿತಗೊಳ್ಳುವ ಆತಂಕದಲ್ಲಿ ಬ್ಲೂ ಪ್ಲ್ಯಾಗ್ ಬೀಚ್ ಮುಚ್ಚುಗಡೆಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಪಡುಬಿದ್ರಿ ಬ್ಲೂ ಪ್ಲ್ಯಾಗ್ ಬೀಚ್ ನ ಪ್ರಬಂಧಕ ವಿಜಯ ಶೆಟ್ಟಿ, ಕಡಲಿನ ಅಬ್ಬರಕ್ಕೆ ಬ್ಲೂ ಪ್ಲ್ಯಾಗ್ ಬೀಚ್ ನ ಸಂಪರ್ಕ ಕೊಂಡಿ ಕಾಂಕ್ರೀಟ್ ರಸ್ತೆ ಕಡಲು ಪಾಲಾಗುವ ಎಲ್ಲಾ ಲಕ್ಷಣಗಳು ಗೊಚರಿಸುತ್ತಿದ್ದು, ಪ್ರವಾಸಿಗರ ಹಾಗೂ ಸಿಬ್ಬಂದಿಗಳ ಹಿತದೃಷ್ಠಿಯಿಂದ ಪ್ರವಾಸೋದ್ಯಮ ಇಲಾಖಾ ಸಹಾಯಕ ನಿರ್ದೇಶಕ ಕುಮಾರ್ ರವರ ಸೂಚನೆಯ ಮೇರೆಗೆ ಇಂದಿನಿಂದಲೇ ಬ್ಲೂ ಪ್ಲ್ಯಾಗ್ ಬೀಚನ್ನು ಮುಚ್ಚಲಾಗಿದೆ ಎಂದರು.
ಮೀನುಗಾರಿಕಾ ಕಾಂಕ್ರೀಟ್ ರಸ್ತೆ ಇನ್ನೇನೂ ಕೆಲವೇ ಹೊತ್ತಲ್ಲಿ ಕಡಲು ಪಾಲಾಗುವ ಸಾಧ್ಯತೆ ಇದ್ದರೂ ಅನುದಾನ ಇಲ್ಲ ಎಂಬ ಕಾರಣವೊಡ್ಡಿ ರಸ್ತೆಯನ್ನು ಉಳಿಸುವ ಯಾವುದೇ ಪ್ರಯತ್ನವನ್ನು ಇಲಾಖೆಗಳಾಗಲೀ.. ಜನಪ್ರತಿನಿಧಿಗಳಾಗಲೀ ಮಾಡಿಲ್ಲ, ಕೆಲವು ಹೊತ್ತಿನಿಂದ ಹಿಂದೆ ಕಾಪು ತಹಶಿಲ್ದಾರ್ ಬಂದು ನೋಡಿ ಹೋಗಿದ್ದು ಬಿಟ್ಟರೆ ಯಾರು ಕೂಡಾ ಹತ್ತಿರ ಸುಳಿದಿಲ್ಲ , ಕಳೆದ ಐದು ವರ್ಷಗಳಿಂದ ಈ ಕಡಲು ಕೊರೆತ ತಡೆಗೆ ಸರ್ಕಾರದಿಂದ ಯಾವುದೇ ಪ್ರಯತ್ನವೂ ನಡೆದಿಲ್ಲ ಎಂಬುದಾಗಿ ಮೀನುಗಾರರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸ್ಥಳದಲ್ಲಿದ್ದ ಪಡುಬಿದ್ರಿ ಠಾಣಾ ಎಸ್ಸೈ ಎಂ.ಎಸ್.ಪ್ರಸನ್ನ ಸಹಿತ ಸಿಬ್ಬಂದಿಗಳು ಅಪಾಯಕಾರಿ ಸ್ಥಳದಲ್ಲಿ ಬ್ಯಾರಿಕೇಡ್ ಇಟ್ಟು ತಡೆಬೇಲಿ ನಿರ್ಮಿಸಿದ್ದಾರೆ.