ಮಂಗಳೂರಿನಲ್ಲಿ ಐದು ದಿನಗಳ ಕಾಲ ಸ್ಟ್ರೀಟ್ ಫುಡ್ ಫಿಯೆಸ್ಟ

ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ದ.ಕ ಜಿಲ್ಲಾಡಳಿತದ ಸಹಕಾರದೊಂದಿಗೆ ಆರಂಭಗೊಂಡ ಮಂಗಳೂರಿನ ಸ್ಟ್ರೀಟ್ ಫುಡ್ ಫಿಯೆಸ್ಟ ಸೀಸನ್-3 ಗೆ ನಗರದ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ನಿರ್ಮಿಸಿದ್ದ ಅದ್ದೂರಿ ವೇದಿಕೆಯಲ್ಲಿ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ವೇದವ್ಯಾಸ್ ಕಾಮತ್ ಅವರ ಉಪಸ್ಥಿತಿಯೊಂದಿಗೆ ಅಧಿಕೃತ ಚಾಲನೆ ದೊರೆಯಿತು.

ಭಾರೀ ನಿರೀಕ್ಷೆ ಮೂಡಿಸಿದ್ದ ಚಾಯ್ ವಾಲಾ ಡಾಲಿರವರು ಉದ್ಘಾಟನಾ ವೇದಿಕೆಯಲ್ಲೇ ತಮ್ಮ ಎಂದಿನ ಶೈಲಿಯಲ್ಲಿ ಚಹಾ ತಯಾರಿಸಿ ಗಣ್ಯರಿಗೆ ನೀಡುತ್ತಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನರು ಸೆಲ್ಫಿಗೆ ಮುಗಿ ಬೀಳುತ್ತಿದ್ದರು. ವಾರಾಂತ್ಯದ ಹಿನ್ನೆಲೆಯಲ್ಲಿ ಮೊದಲ ದಿನವೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸಮೇತ ಸೇರಿದ್ದ ಜನರು ವಿವಿಧ ಆಹಾರ ಮಳಿಗೆಗಳಿಗೆ ಭೇಟಿ ನೀಡಿ ಸಂಭ್ರಮಿಸಿದರು.

“ಸ್ಟ್ರೀಟ್ ಫುಡ್ ಫಿಯೆಸ್ಟ” ಗೆ ಆರಂಭದ ದಿನವೇ ಆಹಾರ ಪ್ರಿಯರಿಂದ ನಿರೀಕ್ಷೆಗೂ ಮೀರಿ ಜನ ಸ್ಪಂದನೆ ಸಿಕ್ಕಿದ್ದು ಜನವರಿ 22ರ ವರೆಗೆ ಪ್ರತಿನಿತ್ಯ ಸಂಜೆ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ತುಳುನಾಡ ಹಾಗೂ ರಾಜ್ಯ-ದೇಶದ ವಿವಿಧ ಶೈಲಿಯ ಸಾಂಪ್ರದಾಯಿಕ ಆಹಾರ ಉತ್ಸವ ನಡೆಯಲಿದೆ ಎಂದು ಆಯೋಜಕರು ತಿಳಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಮೇಯರ್ ಮನೋಜ್ ಕುಮಾರ್, ಉಪ ಮೇಯರ್ ಭಾನುಮತಿ, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಗಿರಿಧರ್ ಶೆಟ್ಟಿ, ಅಧ್ಯಕ್ಷರಾದ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ನರೇಶ್ ಶೆಣೈ, ಯತೀಶ್ ಬೈಕಂಪಾಡಿ, ಅಶ್ವಿತ್ ಕೊಟ್ಟಾರಿ, ನರೇಶ್ ಪ್ರಭು, ಜಗದೀಶ್ ಕದ್ರಿ, ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಹಾಗೂ ಬಿಜೆಪಿಯ ಕಾರ್ಪೊರೇಟರ್ ಗಳ ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು.

ಖ್ಯಾತ ನಿರೂಪಕ ಕಿರಣ್ ಶೆಣೈಯವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related Posts

Leave a Reply

Your email address will not be published.