ಮಂಗಳೂರು: ತಣ್ಣೀರುಬಾವಿ ಬೀಚ್‌ನಲ್ಲಿ ಗಾಳಿಪಟಗಳ ಚಿತ್ತಾರ..!

ಕಡಲ ನಗರಿ ಮಂಗಳೂರಿನ ಬಾನಂಗಳಲ್ಲಿ ವಿವಿಧ ಆಕಾರಗಳ ಗಾಳಿಪಟಗಳ ಚಿತ್ತಾರ.. ಎಲ್ಲಿ ನೋಡಿದರಲ್ಲಿ ಕಲರ್‌ಪುಲ್ ಗಾಳಿಪಟಗಳು.. ಒಂದಕ್ಕೊಂದು ವಿಭಿನ್ನ ಮತ್ತು ಆಕರ್ಷಣೆಯ ಗಾಳಿಪಟಗಳು.. ಇದು ಕಂಡು ಬಂದಿರುವುದು ತಣ್ಣೀರುಬಾವಿ ಬೀಚ್‌ನಲ್ಲಿ..



ಹೌದು.. ಕರಾವಳಿ ಉತ್ಸವದ ಅಂಗವಾಗಿ ಏರ್ಪಡಿಸಿರುವ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ಇಲ್ಲಿನವರಿಗೂ ದೇಶವಿದೇಶಗಳ ಗಾಳಿಪಟಗಳ ವೈವಿಧ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಿತು. ಟೀಮ್ ಮಂಗಳೂರು ಹವ್ಯಾಸಿ ಗಾಳಿಪಟ ತಂಡವು ಒಎನ್‌ಜಿಸಿ ಎಂಆರ್‌ಪಿಎಲ್ ಸಹಕಾರದಲ್ಲಿ ಏರ್ಪಡಿಸಿರುವ ಈ ಉತ್ಸವದಲ್ಲಿ ಈ ಸಲ ಇಂಗ್ಲೆಂಡ್, ಜರ್ಮನಿ, ನೆದರ್ಲೆಂಡ್, ಇಟಲಿ, ಸ್ವೀಡನ್ ಸೇರಿದಂತೆ 10 ದೇಶಗಳ 22 ಗಾಳಿಪಟ ತಂಡಗಳು ಹಾಗೂ ಒಡಿಶಾ, ರಾಜಸ್ಥಾನ, ಮಹಾರಾಷ್ಟ್ರ, ತೆಲಂಗಾಣ, ಕೇರಳ, ಗುಜರಾತ್ ಮತ್ತಿತರ ರಾಜ್ಯಗಳ 30 ತಂಡಗಳು ಪಾಲ್ಗೊಂಡವು. ಜೊತೆಗೆ ಸ್ಥಳೀಯರೂ ಗಾಳಿಪಟಗಳೂ ಹಾರಿಸಿ ಸಂಭ್ರಮಿಸಿದರು.





ಗಾಳಿಪಟ ಹಾರಾಟದಲ್ಲಿ 30 ವರ್ಷಗಳ ಅನುಭವ ಹೊಂದಿರುವ ಸ್ವೀಡನ್‌ನ ಆಂಡ್ರಿಯಾಸ್ ಆಗ್ರೆನ್ (೭೫ ವರ್ಷ) ಅಲೆಗಳ ತೆರದಲ್ಲಿ ಹಾರಾಟ ನಡೆಸುವ ‘ಯಾಂಗಟ್ಝೆ’ಯಿಂದ ಹಿಡಿದು, ರೈಲಿನಂತೆ ಚಲಿಸುವ ‘ನ್ಯೋಮನ್ ಶಿಮ್ಮಿ’ಯವರೆಗೆ ಬಗೆಬಗೆಯ ಗಾಳಿಪಟಗಳನ್ನು ಹಾರಿಸಿದರು. ‘ನ್ಯೋಮನ್ ಶಿಮ್ಮಿ’ ಗಾಳಿಪಟವು ೩೫ ಘಟಕಗಳನ್ನು ಹೊಂದಿದೆ.
ಇಂಗ್ಲೆಂಡ್‌ನ ಅಕ್ಟೋಪಸ್ ಗಾಳಿಪಟ ತಂಡದ ಕ್ಲೇರ್ ಮತ್ತು ಡೇವ್ ಹಾರ್ಡ್ವಿಕ್ ದಂಪತಿ ‘ಹೂಂಜ’ (ರೂಸ್ಟರ್ ) ಗಾಳಿಪಟದೊಂದಿಗೆ ಮೊದಲ ಸಲ ಮಂಗಳೂರಿಗೆ ಬಂದಿದ್ದರು. ಕಾಕತಾಳೀಯ ಎಂದರೆ ಈ ಗಾಳಿಪಟ ಉತ್ಸವದ ಲಾಂಚನ ಕೂಡ ತುಳುವಿನ ಹೂಂಜ ‘ಉರಿಯೆ’. ಕಾಣಿಸಿಕೊಂಡಿತು.
ಬಾನೆಲ್ಲೆಡೆ ಪತಂಗಗಳ ಹಾರಾಟ, ವಿವಿಧ ಬಣ್ಣ, ಆಕಾರ. ಚಿತ್ರ ವಿಚಿತ್ರ ಆಕಾರಗಳ ಗಾಳಿಪಟ ಕಂಡುಬಂದವು. ಚಿಣ್ಣರು, ಹಿರಿಯರು ಕುಟುಂಬ ಸಮೇತರಾಗಿ ಬಂದು ವಿವಿಧ ರೀತಿಯ ಗಾಳಿಪಟ ಕಂಡು ಸಂಭ್ರಮಿಸಿದರು. ಸ್ಥಳದಲ್ಲೇ ಮಾರಾಟವಾಗುವ ಗಾಳಿಪಟ ಕೊಂಡು ಮಕ್ಕಳೊಂದಿಗೆ ಹಾರಿಸಿ ಸಂಭ್ರಮಿಸಿದರು. ಟೆಡ್ಡಿಬೇರ್, ಹುಲಿ, ಯಕ್ಷಗಾನ, ಸಿಂಹ, ವಿವಿಧ ಗೊಂಬೆ, ಹಾವು, ಗಣಪತಿ ಸಹಿತ ವಿವಿಧ ಗಾಳಿಪಟಗಳು ಬಾನಂಗಳದಲ್ಲಿ ರಾರಾಜಿಸುತ್ತಿತ್ತು.