ಅಶ್ವತ್ಥ್ ನಾರಾಯಣ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡಲಿದೆ : ಐವನ್ ಡಿಸೋಜ

ಮಾಜಿ ಸಿಎಂ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಟಿಪ್ಪುವಿನಂತೆ ಹೊಡೆದು ಹಾಕಬೇಕು ಎಂದು ಪ್ರಚೋದನಕಾರಿ ಹೇಳಿಕೆ ನೀಡಿರುವ ಸಚಿವ ಅಶ್ವತ್ಥನಾರಾಯಣ ಅವರನ್ನು ಸಂಪುಟದಿಂದ ಕಿತ್ತುಹಾಕಿ, ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಕಾಂಗ್ರೆಸ್ ಬೀದಿಗೆ ಇಳಿದು ಹೋರಾಟ ಮಾಡಲಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ಉನ್ನತ ಶಿಕ್ಷಣ ಸಚಿವರಾಗಿ ಸಾಮಾಜಿಕ ಮೌಲ್ಯವನ್ನು ಎತ್ತಿ ಹಿಡಿದು ಯುವಜನತೆಗೆ ಮಾರ್ಗದರ್ಶಕರಾಗಿ ಇರಬೇಕಾದವರು ಕೋಮು ಭಾವನೆ ಕೆರಳಿಸುವ ಕೆಟ್ಟ ಮನೋಸ್ಥಿತಿಗೆ ನಾಂದಿ ಹಾಡಿರುವುದು ಇಡೀ ರಾಜ್ಯಕ್ಕೆ ಮಾರಕ. ಇದು ಸಿದ್ದರಾಮಯ್ಯ ಅವರನ್ನು ನಿರ್ಭೀತಿಯಿಂದ ಕೆಲಸ ಮಾಡದಂತೆ ತಡೆಯುವ ಮತ್ತು ಜನರಿಗೆ ಅಪರಾಧ ಮಾಡಲು ಪ್ರಚೋದನೆ ನೀಡುವ ಹೇಯ ಕೃತ್ಯವಾಗಿದೆ ಎಂದು ಹೇಳಿದರು.
ಇಂಥವರಿಗೆ ಸಚಿವರಾಗಿ ಅಧಿಕಾರದಲ್ಲಿ ಮುಂದುವರೆಯುವ ಯಾವ ನೈತಿಕತೆಯೂ ಇಲ್ಲ. ಕೂಡಲೇ ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕು ಎಂದು ಐವಾನ್ ಡಿಸೋಜ ಹೇಳಿದರು. ಟಿಪ್ಪು ಪಾಠ ಪಠ್ಯದಲ್ಲಿದ್ದು, ಬ್ರಿಟಿಷರ ವಿರುದ್ಧದ ಹೋರಾಟ ಬಗ್ಗೆ ನಾವೆಲ್ಲ ಓದಿದ್ದೇವೆ. ಟಿಪ್ಪು ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಜಗದೀಶ್ ಶೆಟ್ಟರ್, ಟಿಪ್ಪು ವೇಷ ಭೂಷಣ ಧರಿಸಿದ್ದ ಯಡಿಯೂರಪ್ಪ ಅವರಿಗೂ ನಿಮ್ಮ ಬಹಿರಂಗ ಹೇಳಿಕೆ ಇದು ಅನ್ವಯಿಸುತ್ತಾ.. ಅವರನ್ನು ಹೊಡೆದು ಹಾಕಲು ಕರೆ ಕೊಡುತ್ತೀರಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಮುಖಂಡರಾದ ಕೋಡಿಜಾಲ್ ಇಬ್ರಾಹಿಂ, ಅಪ್ಪಿ, ಸಬಿತಾ ಮಿಸ್ಕಿತ್, ಪ್ರಕಾಶ್ ಸಾಲ್ಯಾನ್, ಭಾಸ್ಕರ ರಾವ್ ಮತ್ತಿರರಿದ್ದರು.
