ಕಾಂಗ್ರೆಸ್ ಆಡಳಿತದ ಅವ್ಯವಹಾರಕ್ಕೆ ಬಿಜೆಪಿ ಬೆಂಬಲ ನೀಡುತ್ತಿದೆ : ಜೆಡಿಎಸ್ ರಾಜ್ಯ ವಕ್ತಾರ ದಿನಕರ್ ಉಳ್ಳಾಲ್ ಆರೋಪ

ಉಳ್ಳಾಲ ನಗರಸಭೆಯಲ್ಲಿ ಕಳೆದ ಎರಡೂವರೆ ವರ್ಷದಿಂದ ಬಹುಮತವಿಲ್ಲದ ಕಾಂಗ್ರೆಸ್ ಪಕ್ಷ ದುರಾಡಳಿತ ಮತ್ತು ಅವ್ಯವಹಾರಗಳಿಗೆ ಪ್ರಸಿದ್ಧಿಯನ್ನು ಪಡೆದಿದ್ದು, ದೇಶದಲ್ಲಿ ಮತ್ತು ರಾಜ್ಯದಲ್ಲಿ ಬದ್ಧ ವೈರಿಯಾಗಿರುವ ಬಿಜೆಪಿ ಉಳ್ಳಾಲ ನಗರಸಭೆಯಲ್ಲಿ ಮಾತ್ರ ಕಾಂಗ್ರೆಸ್‍ನೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್ ಆಡಳಿತದ ಅವ್ಯವಹಾರಕ್ಕೆ ಬೆಂಬಲ ನೀಡುತ್ತಿದೆ ಎಂದು ಜಾತ್ಯಾತೀತ ಜನತಾದಳದ ರಾಜ್ಯ ವಕ್ತಾರ ಹಾಗೂ ಉಳ್ಳಾಲ ನಗರಸಭೆಯ ಸದಸ್ಯ ದಿನಕರ ಉಳ್ಳಾಲ್ ಆರೋಪಿಸಿದ್ದಾರೆ.

ತೊಕ್ಕೊಟ್ಟು ಸೇವಾ ಸೌಧದಲ್ಲಿರುವ ಉಳ್ಳಾಲ ಪ್ರೆಸ್‍ಕ್ಲಬ್‍ನಲ್ಲಿ ನಡದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಕಳೆದ ಎರಡೂವರೆ ವರ್ಷದಲ್ಲಿ ಮೂರು ಬಾರಿ ಬಜೆಟ್ ಮಂಡನೆ ಮಾಡಿದರೂ ಕುಡಿಯುವ ನೀರು, ಚರಂಡಿ, ರಸ್ತೆ, ದಾರಿದೀಪ, ಘನತ್ಯಾಜ್ಯದ ಬಗ್ಗ ಯಾವುದೇ ಪರಿಣಾಮಕಾರಿ ಕೆಲಸ ಆಗಿಲ್ಲ. ಬಿಜೆಪಿಯ ಒಳ ಒಪ್ಪಂದದಿಂದ ಇಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಲವಾಗಿದ್ದು, ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಂತೆ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.

ನಗರಸಭಾ ಸದಸ್ಯ ಖಲೀಲ್ ಮಾತನಾಡಿ ಕಳೆದ ಮೂರು ಅವಧಿಯಲ್ಲಿ ಬಜೆಟ್‍ನಲ್ಲಿ ಪ್ರತೀ ಸದಸ್ಯರಿಗೆ ಆನುದಾನ ಬಿಡುಗಡೆ ಮಾಡಿದರೂ 6 ವಾರ್ಡ್‍ಗಳಲ್ಲಿ ಕಾಮಗಾರಿ ನಡೆದಿಲ್ಲ. ಟೆಂಡರ್ ಕರೆಯದೆ ಕಾಮಗಾರಿ ನಡೆಸಿ ಸುಮಾರು 4 ಕೋಟಿಗೂ ಹೆಚ್ಚು ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದೆ, ಇದೀಗ ಉಳಿದ ವಾರ್ಡ್‍ಗಳ ಕಾಮಗಾರಿ ನಡೆಸಲು ಯಾರೂ ಮುಂದೆ ಬರುತ್ತಿಲ್ಲ. ಉಳ್ಳಾಲದಲ್ಲಿ ಸರಿಯಾದ ತೆರಿಗೆ ಸಂಗ್ರಹ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದು, ಅಂಗಡಿ ಮಾಲಕರು ತೆರಿಗೆ ನೀಡದಿದ್ದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದರು.

ಸುದ್ದಿಗೋಷ್ಟಿಯಲ್ಲಿ ಸದಸ್ಯ ಅಬ್ದುಲ್ ಜಬ್ಬಾರ್ ಸದಸ್ಯ ಅಬ್ದುಲ್ ಬಶೀರ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.