ಕಡಬ : ರೈಲು ಇಂಜಿನ್ ಢಿಕ್ಕಿಯಾಗಿ ವ್ಯಕ್ತಿ ಗಂಭೀರ

ಕಡಬ: ರೈಲು ನಿಲ್ದಾಣದ ಬಳಿ ಆಕಸ್ಮಿಕವಾಗಿ ರೈಲು ಇಂಜಿನ್ ಢಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಡಬದ ಸುಬ್ರಹ್ಮಣ್ಯ ರೋಡ್ (ನೆಟ್ಟಣ) ನೆಟ್ಟಣದಲ್ಲಿ ನಡೆದಿದೆ. ಐತ್ತೂರು ಗ್ರಾಮದ ಓಟೆಕಜೆ ನಾಗಣ್ಣ ಗಂಭೀರ ಗಾಯಗೊಂಡ ವ್ಯಕ್ತಿ. ರೈಲು ಇಂಜಿನ್ ಢಿಕ್ಕಿಯಾದ ರಭಸಕ್ಕೆ ಒಂದು ಕಾಲು ಮತ್ತು ಒಂದು ಕೈ ತುಂಡಾಗಿದ್ದು ತುರ್ತು ಚಿಕಿತ್ಸೆಗಾಗಿ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮಂಗಳೂರಿನಲ್ಲಿ ನಡೆದಿದ್ದ ತನ್ನ ಮಗಳು ಭಾಗವಹಿಸಿದ್ದ ಕ್ರೀಡಾಕೂಟಕ್ಕೆ ತೆರಳಿ ಪ್ಯಾಸೆಂಜರ್ ರೈಲು ಮೂಲಕ ನೆಟ್ಟಣ ರೈಲು ನಿಲ್ದಾಣದಲ್ಲಿ ತಮ್ಮ ಸತೀಶ ಓಟೆಕಜೆ ಎಂಬವರ ಜೊತೆ ಬಂದಿಳಿದಿದ್ದರು. ಬಳಿಕ ಅಡ್ಡ ದಾರಿ ಮೂಲಕ ಮನೆಯತ್ತ ತೆರಳಲು ನಿಲ್ದಾಣದ ಸಮೀಪದಲ್ಲೇ ರೈಲು ಹಳಿ ದಾಟುತ್ತಿದ್ದಾಗ ಏಕಾಏಕಿ ರೈಲು ಇಂಜಿನ್ ಬಂದಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಕೈ,ಕಾಲು ಮುರಿದು ಹಳಿ ಬದಿ ಎಸೆಯಲ್ಪಟ್ಟು ಸಾವಿನಿಂದ ಅದೃಷ್ಟವಶಾತ್ ಪಾರಾಗಿದ್ದಾರೆ ಎನ್ನಲಾಗಿದೆ.
