ಕಡಬ: ಮಳೆ ಬಂದು ವಾರ ಕಳೆದರೂ ರಸ್ತೆ ಸಂಪರ್ಕ ಇಲ್ಲದೆ ಜನತೆಯ ಪರದಾಟ

ಕಡಬ: ಕಡಬ ತಾಲೂಕು ಆಲಂಕಾರು ಗ್ರಾಮದ ಕಕ್ವೆ ಎಂಬಲ್ಲಿ ಮೇ 30ರಂದು ಸುರಿದ ಧಾರಕಾರ ಮಳೆಗೆ ರಸ್ತೆ ಕೊಚ್ಚಿ ಹೋಗಿ10 ಮನೆಗಳ ಬಾಹ್ಯ ಸಂಪರ್ಕ ಕಳೆದುಕೊಂಡಿದೆ. ಘಟನೆ ನಡೆದು ವಾರ ಕಳೆದರೂ ಸಮಸ್ಯೆ ಪರಿಹಾರವಾಗದೆ ಜನ ಪರದಾಡುತ್ತಿದ್ದಾರೆ.

ಮೇ 30ರಂದು ಸಾಯಂಕಾಲದಿಂದ ತಡರಾತ್ರಿಯವರೆಗೆ ತಾಲೂಕಿನ ಕುಂತೂರು, ಆಲಂಕಾರು, ಸವಣೂರು, ಕೊಯಿಲ, ರಾಮಕುಂಜ, ಕಾಣಿಯೂರು ಮೊದಲಾದೆಡೆ ಎಡಬಿಡದೆ ಧಾರಕಾರ ಮಳೆಯಾಗಿತ್ತು. ಪರಿಣಾಮ ಬಹುತೇಕ ಕಡೆ ರಸ್ತೆಗೆ ಮಣ್ಣು ಬಿದ್ದು ಸಂಪರ್ಕ ಬಂದ್ ಅಗಿತ್ತು. ಹಲವು ಮನೆಗಳಿಗೆ ಮಣ್ಣು ಜರಿದಿದೆ. ಕೆಲವೆಡೆ ಮನೆ ಪಕ್ಕದ ಮಣ್ಣು ಕುಸಿದು ಮನೆಗಳಿಗೆ,ಕೃಷಿಗೆ ಹಾನಿಯಾಗಿದೆ. ಕೃಷಿ ತೋಟದ ಪಕ್ಕದಲ್ಲಿ ಹರಿಯುವ ತೋಡುಗಳು ಉಕ್ಕಿ ಹರಿದು ಕೃಷಿ ನಾಶವಾಗಿದೆ. ಅಡಿಕೆ ಗಿಡಗಳು ಕುಮರಾಧಾರ ನದಿಯಲ್ಲಿ ಕೊಚ್ಚಿಹೋಗಿದೆ. ಮರಗಳು ಉರುಳಿ ಬಿದ್ದಿತ್ತು. ಕಂಡು ಕೇಳರಿಯದ ಮಳೆ ಬಹಲಷ್ಟು ಹಾನಿ ಉಂಟು ಮಾಡಿದೆ. ಅಂತೆಯೇ ಕಕ್ವೆ ಎಂಬಲ್ಲಿ ಪದ್ಮಯ್ಯ ಗೌಡರ ತೋಟದ ಪಕ್ಕದಲ್ಲಿ ಹರಿಯುತ್ತಿದ್ದ ಕಣಿಯಲ್ಲಿ ಉಕ್ಕಿ ಹರಿದ ಮಳೆ ನೀರಿನ ಜೊತೆಗೆ ರಸ್ತೆಯಲ್ಲಿ ಹರಿದ ಮಳೆ ನೀರು ಒಟ್ಟಾಗಿ ರಸ್ತೆಯ ಒಂದು ಭಾಗದಲ್ಲಿ ಹರಿದ ಪರಿಣಾಮ ರಸ್ತೆ ಯ ಒಂದು ಭಾಗ ಕೊಚ್ಚಿಹೋಗಿ ಸ್ವಲ್ಪ ಭಾಗ ಉಳಿದಿದೆ.

ಇದರೊಂದಿಗೆ ಪದ್ಮಯ್ಯ ಗೌಡರ ಸುಮಾರು 100 ಕ್ಕೂ ಹೆಚ್ಚು ಫಸಲುಭರಿತ ಅಡಿಕೆ ನೀರು ಪಾಲಾಗಿದೆ. ಶಿವಣ್ಣ ಗೌಡರ ಫಸಲು ಭರಿತ ಸುಮಾರು 4೦೦ಕ್ಕೂ ಹೆಚ್ಚು ಗಿಡಗಳ ಮದ್ಯೆ ಕೆಸರು ಮಣ್ಣು ತುಂಬಿಕೊಂಡಿದೆ. ತೋಟಕ್ಕೆ ನೀರುಣಿಸಲು ಇದ್ದ ಬೃಹದಾಕಾರದ ಕೆರೆ ಸಂಪೂರ್ಣ ಮಣ್ಣು ತುಂಬಿಕೊಂಡು ಮುಚ್ಚಿ ಹೋಗಿದೆ. ತೋಟದ ಪಕ್ಕದಲ್ಲಿ ದ್ದ ಮರಗಳು,ಅಡಿಕೆ ಗಿಡಗಳು ಧರಶಾಯಿಯಾಗಿದೆ. ಇದೀಗ ರಸ್ತೆ ಯನ್ನು ದಿನ ನಿತ್ಯ ಬಳಕೆ ಮಾಡುತ್ತಿದ್ದ ವರು ಸಂಪರ್ಕ ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಮೇ.೩೧ ರಂದು ಗ್ರಾಮ ಆಡಳಿತಾಧಿಕಾರಿ, ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ, ಸ್ಥಳಿಯಡಳಿತದ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ . ಆದರೆ ಇದೊಂದು ಗಂಭೀರ ಸ್ವರೂಪದ ಸಮಸ್ಯೆಯಾಗಿದೆ. ತಹಶೀಲ್ದಾರ ಸ್ಥಳಕ್ಕೆ ಭೇಟಿ ನೀಡಿ ತಕ್ಷಣದ ಪರಿಹಾರ ಒದಗಿಸಬೇಕು ಇಲ್ಲವಾದಲ್ಲಿ ಅನಾಹುತ ಉಂಟಾದಲ್ಲಿ ಕಂದಾಯ ಇಲಾಖೆಯೆ ಹೊಣೆಹೊರಬೇಕಾಗುತ್ತದೆ ಎಂದು ಈ ಭಾಗದ ಜನ ಎಚ್ಚರಿಕೆ ನೀಡಿದ್ದಾರೆ.