ಅರಬರ ನಾಡಿನಲ್ಲಿ ಅದ್ಧೂರಿಯ ಕರ್ನಾಟಕ ರಾಜ್ಯೋತ್ಸವ
ಅಬುಧಾಬಿ : ನಾಲ್ಕು ದಶಕಗಳಿಗಿಂತಲೂ ಹೆಚ್ಚಿನ ಶ್ರೀಮಂತ ಇತಿಹಾಸ ಇರುವ ಅಬುಧಾಬಿಯ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕರ್ನಾಟಕ ಸಂಘವು ಇದೀಗ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ರೂಪುರೇಷೆಗಳನ್ನು ಹಾಕಿಕೊಂಡಿದ್ದು ಕಾರ್ಯಕ್ರಮವು ಇದೆ ನವೆಂಬರ್ ತಿಂಗಳ 6ನೇ ತಾರೀಖಿನಂದು ಅಪರಾಹ್ನ 3:30 ಘಂಟೆಗೆ ಸರಿಯಾಗಿ ಅಬುಧಾಬಿಯ ಇಂಡಿಯನ್ ಸೋಶಿಯಲ್ ಆಂಡ್ ಕಲ್ಚರಲ್ ಸೆಂಟರ್ ನಲ್ಲಿ ಜರುಗಲಿದೆ.
ಮೂರು ಬಾರಿ ಯಶಸ್ವಿಯಾಗಿ ವಿಶ್ವ ಕನ್ನಡ ಸಂಸ್ಕ್ರತಿ ಸಮ್ಮೇಳನ ಹಾಗು ಒಂದು ಬಾರಿ ಅಂತಾರಾಷ್ಟ್ರೀಯ ಕುವೆಂಪು ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಿದ ಹೆಗ್ಗಳಿಕೆಗೆ ಅಬುಧಾಬಿ ಕರ್ನಾಟಕ ಸಂಘವು ಪಾತ್ರವಾಗಿದ್ದು , ಜನಪ್ರಿಯ ಸಂಘಟಕರೂ ,ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರೂ ಆಗಿರುವ ರಾಜ್ಯ ಪ್ರಶಸ್ತಿ ವಿಜೇತ ಶ್ರೀ ಸರ್ವೋತ್ತಮ ಶೆಟ್ಟಿ ಯವರ ಸಾರಥ್ಯದಲ್ಲಿ ಜರುಗಲಿರುವ ಈ ಕಾರ್ಯಕ್ರಮದಲ್ಲಿ ಸಂಘದ ಪ್ರತಿಭಾವಂತ ಕಲಾವಿದರುಗಳಿಂದ ಭರತನಾಟ್ಯ ,ಸಮೂಹ ಗಾನ,ಜಾನಪದ ನ್ರತ್ಯಗಳು ,ರೂಪಕಗಳು ಇವೆ ಮುಂತಾದ ಕಲಾ ಪ್ರದರ್ಶನಗಳು ಅನಾವರಣಗೊಳ್ಳಲಿರುವುದು .
ಮುಖ್ಯ ಅತಿಥಿಯಾಗಿ ಖ್ಯಾತ ಹಾಸ್ಯ ಕಲಾವಿದೆ ಮಾತಿನ ಮಲ್ಲಿ ಶ್ರೀಮತಿ ಸುಧಾ ಬರಗೂರು ಪಾಲ್ಗೊಂಡು ತಮ್ಮ ಹಾಸ್ಯ ಲೇಪಿತ ಮಾತುಗಳಿಂದ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ನೀಡಲಿರುವರು . ಪ್ರತಿವರುಷದಂತೆ ಈ ವರುಷವೂ ಸಾಧಕರಿಗೆ ಕೊಡಮಾಡುವ ಪ್ರತಿಷ್ಠಿತ ದ .ರಾ .ಬೇಂದ್ರೆ ಪ್ರಶಸ್ತಿಯನ್ನು ಈ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಿದ್ದು ಕನ್ನಡ ನಾಡು,ನುಡಿಗೆ ಅನನ್ಯ ಕೊಡುಗೆಯನ್ನು ನೀಡಿರುವಂತಹ ಕನ್ನಡ ಪಾಠ ಶಾಲೆ ದುಬಾಯಿ ಇದರ ಅಧ್ಯಕ್ಷರಾದ ಶ್ರೀ ಶಶಿಧರ ನಾಗರಾಜಪ್ಪ ಇವರಿಗೆ ಈ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗುವುದು . ಅಲ್ಲದೆ ಶಿಕ್ಷಣದಲ್ಲಿ ವಿಶೇಷ ಸಾಧನೆಯನ್ನು ಮಾಡಿರುವ ಕನ್ನಡಿಗ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮದಲ್ಲಿ ಪುರಸ್ಕರಿಸಲಾಗುವುದು . ಅರಬರ ನಾಡಿನಲ್ಲಿ ಕನ್ನಡದ ತೇರನ್ನು ಎಳೆಯುವ ಈ ಕಾಯಕದಲ್ಲಿ ಕನ್ನಡಿಗರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ ಯವರು ಕರೆ ನೀಡಿದ್ದಾರೆ . ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ ಯವರನ್ನು ದೂರವಾಣಿ ಸಂಖ್ಯೆ 506125464 ಮುಖೇನ ಸಂಪರ್ಕಿಸಬಹುದು.