ಕಾರ್ಕಳ ಪುರಸಭೆ : ಬೀದಿ ನಾಯಿಗಳ ಉಪಟಳಕ್ಕೆ ಕಡಿವಾನ ಹಾಕುವಂತೆ ಆಗ್ರಹ

ಕಾರ್ಕಳ: ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟ ಎಲ್ಲೆಮೀರಿದೆ. ಅದಕ್ಕೆ ಕಡಿವಾಣ ಹಾಕುವುದಕ್ಕೆ ಇನ್ನೂ ಸಾಧ್ಯವಾಗಿಲ್ಲ. ಒಂದೊಂದು ಕಾರಣಗಳನ್ನು ಅಧಿಕಾರಿಗಳು ಸಭೆಗೆ ನೀಡುತ್ತಿರುವುದರಿಂದ ಸಮಸ್ಯೆ ಶಾಶ್ವತವಾಗಿ ಉಳಿದಿದೆ. ಕೂಡಲೇ ಕ್ರಮಕೈಗೊಳ್ಳಿ ಎಂದು ಪುರಸಭಾ ಪ್ರತಿಪಕ್ಷ ಮುಖಂಡ ಅಶ್ಪಕ್ ಅಹಮ್ಮದ್ ಆಗ್ರಹಿಸಿದಾರೆ.ಕಾರ್ಕಳ ಪುರಸಭೆಯ ಅಧ್ಯಕ್ಷೆ ಸುಮಾ ಅಧ್ಯಕ್ಷತೆಯಲ್ಲಿ ಬಿ.ಮಂಜುನಾಥ ಪೈ ಸಭಾಂಗಣದಲ್ಲಿ ಜರುಗಿದ್ದ ಸಾಮಾನ್ಯ ಸಭೆಯಲ್ಲಿ ಮೇಲಿನ ವಿಚಾರವನ್ನು ಮುಂದಿಟ್ಟು ಅಶ್ಪಕ್ ಅಹಮ್ಮದ್ ಮಾತನಾಡಿದರು.

ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಪಶುಸಂಗೋಪನೆ ಇಲಾಖೆಯ ವೈದ್ಯ ಡಾ.ಸುನಿಲ್‍ಕುಮಾರ್ ಅವರನ್ನು ಸಭೆಗೆ ಕರೆಯಿಸಿ ಮಾಹಿತಿ ಪಡೆಯಲಾಯಿತು. ಮಾಹಿತಿ ನೀಡಿದ ವೈದ್ಯರು ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ಮೂಲಕವೇ ಸಮಸ್ಯೆ ಬಗೆಹರಿಸಬೇಕಿದೆ. ಅದು ಬಿಟ್ಟರೆ ಅನ್ಯ ದಾರಿಯಿಲ್ಲ. ಪ್ರಾಣಿಗಳಿಗೆ ಸಂಬಂಧಿಸಿ ಕಾನೂನಿನ ತೊಡಕಿದೆ. ರಾಜ್ಯದಲ್ಲಿ 5ರಿಂದ 6 ಎನ್‍ಜಿಒಗಳಷ್ಟೆ ಗುತ್ತಿಗೆ ಸಂತಾನ ಹರಣ ಚಿಕಿತ್ಸೆ ನಡೆಸಲು ಗುತ್ತಿಗೆ ಪಡೆದುಕೊಳ್ಳುತ್ತಾರೆ. ಸಂತಾನ ಹರಣ ನಡೆಸಲು ಇಂತಿಷ್ಟೆ ಸಂಖ್ಯೆಯ ನಾಯಿಗಳಿರಬೇಕು ಎಂಬ ನಿಯಮಕ್ಕೆ ಅವರು ಬದ್ಧರಾಗಿರುತ್ತಾರೆ ಎಂದರು.

ಇದರಲ್ಲಿ ಲೋಪದೋಷಗಳು ಎದುರಾದರೂ ಪ್ರಾಣಿ ದಯಾ ಸಂಘದ ಕೆಂಗಣ್ಣಿಗೂ ಗುರಿಯಾಗಬೇಕಾದಿತ್ತೆಂಬ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ಅವರು ಸಭೆಗೆ ಮಾಹಿತಿ ನೀಡಿದರು. ಅಂತಿಮವಾಗಿ ಟೆಂಡರು ಕರೆಯುವ ಬಗ್ಗೆ ನಿರ್ಧರಿಸಲಾಯಿತು.ಪುರಸಭೆ ವ್ಯಾಪ್ತಿಯಲ್ಲಿ 13 ಕೋ.ರೂ. ಒಳ ಚರಂಡಿ ಕಾಮಗಾರಿ ನಡೆದಿದೆ, ಮೂರು ಮಾರ್ಗದ ರಸ್ತೆಯನ್ನು ಒಳಚರಂಡಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡವರೇ ದುರಸ್ತಿ ನಿರ್ವಹಿಸಬೇಕಿತ್ತು. ಅದಾಗದೆ ರಸ್ತೆ ಸಮಸ್ಯೆ ಜೀವಂತವಾಗಿ ಉಳಿದಿದೆ. ಯಾವುದಕ್ಕೆ ಎಷ್ಟೆಷ್ಟು ಖರ್ಚು ಆಗಿದೆ ಎಂದು ಸಾರ್ವಜನಿಕರ ಮುಂದೆ ಆಡಿಟ್ ಇಡುವಂತೆ ಈ ಹಿಂದಿನ ಸಭೆಗಳಲ್ಲಿ ಒತ್ತಾಯಿಸಿದ್ದೆ ಅದ್ಯಾವುದಕ್ಕೂ ಉತ್ತರವಿಲ್ಲ ಎಂದು ಅಶ್ಪಕ್ ಅಹಮ್ಮದ್ ಹೇಳಿದರು.

ಒಳಚರಂಡಿ ಮಂಡಳಿ ಇಂಜಿನೀಯರ್ ಲಿಖಿತ ರೂಪದಲ್ಲಿ ಲೆಕ್ಕಪತ್ರ ನೀಡಿದ್ದಾರೆ ಎಂದು ಖರ್ಚಾದ ಲೆಕ್ಕಪತ್ರವನ್ನು ಮುಖ್ಯಾಧಿಕಾರಿ ಸಭೆಗೆ ಓದಿ ಹೇಳಿದರು. ಚರಂಡಿ ಸಮಸ್ಯೆಯಿಂದ ರಸ್ತೆ ಹಾಳಾಗಿದೆ. ಚರಂಡಿಯಾಗದೆ ಇರುವುದು ಪೂರ್ಣ ಡಾಮರೀಕರಣ ಮಾಡುವುದಕ್ಕೆ ಸಮಸ್ಯೆಯಾಗಿದೆ ಎಂಬ ವಿಚಾರವನ್ನು ಪುರಸಭಾ ಅಧ್ಯಕ್ಷೆ ಸುಮಕೇಶವ ಸಭೆಯ ಮುಂದಿಟ್ಟರು. ಪುರಸಭಾ ಸಾಮಾನ್ಯ ಸಭೆಯಲ್ಲಿ ಬೀದಿ ನಾಯಿಗಳ ಕುರಿತು ಪಶುಸಂಗೋಪನೆ ಇಲಾಖೆಯ ವೈದ್ಯ ಡಾ.ಸುನಿಲ್‍ಕುಮಾರ್ ಮಾಹಿತಿ ನೀಡಿದರು. ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ಉಪಾಧ್ಯಕ್ಷೆ ಪಲ್ಲವಿ, ಮುಖ್ಯಾಧಿಕಾರಿ ರೂಪಾ ಶೆಟ್ಟಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.