ಕಾರ್ಕಳ: ಹಣದಾಸೆಗೆ ಹಸುಗೂಸು ಮಾರಾಟ ಪ್ರಕರಣ: ದಂಪತಿ, ನಿವೃತ್ತ ನರ್ಸ್ ಸೇರಿ ಐವರ ವಿರುದ್ಧಕೇಸ್ ದಾಖಲು

ಕೇವಲ ಒಂದು ಲಕ್ಷ ರೂಪಾಯಿ ಹಣದಾಸೆಗಾಗಿ 2 ದಿನದ ಹಸುಗೂಸನ್ನು ಚಿಕ್ಕಮಗಳೂರಿನ ಎನ್‌ಆರ್‌ಪುರದಿಂದ ಕಾರ್ಕಳದ ದಂಪತಿಗೆ ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಭಾಗಿಯಾದ ಮಗುವಿನ ಹೆತ್ತವರು, ಮಗುವನ್ನು ಪಡೆದವರು ಹಾಗೂ ಆರೋಗ್ಯ ಇಲಾಖೆಯ ನಿವೃತ್ತ ನರ್ಸ್ ಕುಸುಮಾ ಸೇರಿ ಐವರ ವಿರುದ್ಧ ಕೇಸ್ ದಾಖಲಾಗಿದೆ.
ಕಾರ್ಕಳದ ರಾಘವೇಂದ್ರ ಎಂಬವರಿಗೆ 2 ದಿನದ ಹೆಣ್ಣು ಮಗುವನ್ನು ಮಾರಾಟ ಮಾಡಲಾಗಿತ್ತು. ರಾಘವೇಂದ್ರ ಅವರಿಗೆ ಮಕ್ಕಳಿಲ್ಲದ ಹಿನ್ನಲೆಯಲ್ಲಿ ಮಗುವನ್ನು ಸಾಕುವ ಉದ್ದೇಶದಿಂದ ತನ್ನ ಹಿರಿಯ ಸಹೋದರಿ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಕುಸುಮಾ ಅವರ ಸಹಾಯ ಪಡೆದಿದ್ದರು. ಎನ್‌ಆರ್‌ಪುರದ ದಂಪತಿಗೆ 1 ಲಕ್ಷ ಹಣ ನೀಡುವುದಾಗಿ ಮೊದಲೇ ಮಾತುಕತೆ ನಡೆದಿತ್ತು. ಇದಾದ ಬಳಿಕ ಮಗು ಜನಿಸಿದ ಕೇವಲ ಎರಡೇ ದಿನಕ್ಕೆ ದಂಪತಿಗೆ 5 ಸಾವಿರ ಮುಂಗಡ ಹಣ ಕೊಟ್ಟು ಮಗುವನ್ನು ಗುಟ್ಟಾಗಿ ತಂದು ರಾಘವೇಂದ್ರ ಅವರಿಗೆ ಒಪ್ಪಿಸಲಾಗಿತ್ತು. ಆದರೆ ಆಶಾ ಕಾರ್ಯಕರ್ತೆ ದಂಪತಿ ಮನೆಗೆ ಭೇಟಿ ನೀಡಿದಾಗ ಮನೆಯಿಂದ ಮಗು ನಾಪತ್ತೆಯಾಗಿತ್ತು. ಈ ವಿಚಾರ ತಿಳಿದ ತಕ್ಷಣವೇ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮನೆಗೆ ಧಾವಿಸಿ ಪೋಷಕರನ್ನು ವಿಚಾರಿಸಿದಾಗ ಮಗು ಕಾರ್ಕಳಕ್ಕೆ ಮಾರಾಟ ಮಾಡಲಾದ ವಿಚಾರ ಬೆಳಕಿಗೆ ಬಂದಿದೆ. ತಕ್ಷಣವೇ ಸಿಡಿಪಿಓ ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಕಾರ್ಕಳಕ್ಕೆ ಬಂದು ರಾಘವೇಂದ್ರ ದಂಪತಿಗಳ ಬಳಿಯಿದ್ದ ಹೆಣ್ಣು ಮಗುವನ್ನು ವಶಕ್ಕೆ ಪಡೆದು ರಕ್ಷಿಸಿದ್ದಾರೆ.
ಮಕ್ಕಳಿಲ್ಲದ ದಂಪತಿ ಮಗು ಬೇಕೆನ್ನುವ ಆಸೆಯಿಂದ ಕಾನೂನು ಜ್ಞಾನವಿಲ್ಲದೆ ನಿಯಮ ಬಾಹಿರವಾಗಿ ಮಗುವನ್ನು ತಂದು ಸಾಕಲು ಮುಂದಾಗಿದ್ದರು. ಆದರೆ ಕಾನೂನು ಪ್ರಕಾರ ದತ್ತು ಪಡೆಯುವ ಅವಕಾಶವಿದ್ದರೂ ಇದನ್ನು ಪಾಲಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಾನವ ಕಳ್ಳ ಸಾಕಾಣೆಯ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.
