HomeFresh Newsನೆಲ್ಯಾಡಿಯಲ್ಲಿ ಆಧಾರ್ ಕೇಂದ್ರಕ್ಕೆ ಕೆ ಆರ್ ಎಸ್ ಪಕ್ಷ ಆಗ್ರಹ: 15 ದಿನದಲ್ಲಿ ಕ್ರಮವಿಲ್ಲದಿದ್ದರೆ ಪ್ರತಿಭಟನೆ...

ನೆಲ್ಯಾಡಿಯಲ್ಲಿ ಆಧಾರ್ ಕೇಂದ್ರಕ್ಕೆ ಕೆ ಆರ್ ಎಸ್ ಪಕ್ಷ ಆಗ್ರಹ: 15 ದಿನದಲ್ಲಿ ಕ್ರಮವಿಲ್ಲದಿದ್ದರೆ ಪ್ರತಿಭಟನೆ ಎಚ್ಚರಿಕೆ

ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಖಾಯಂ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕೇಂದ್ರದ ಕೊರತೆಯಿಂದ ಸುಮಾರು 18,000ಕ್ಕೂ ಅಧಿಕ ಜನಸಂಖ್ಯೆ ತೀವ್ರ ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನೆಲ್ಯಾಡಿ ಘಟಕವು ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ಪಕ್ಷದ ವತಿಯಿಂದ ಪುತ್ತೂರಿನ ಹಿರಿಯ ಅಂಚೆ ಅಧೀಕ್ಷಕರಿಗೆ ಸಲ್ಲಿಸಲಾದ ಮನವಿಯಲ್ಲಿ, ನೆಲ್ಯಾಡಿ, ಶಿರಾಡಿ, ಗೋಳಿತೊಟ್ಟು, ಕೌಕ್ರಾಡಿ, ರಂಜಿಲಾಡಿ, ಬಲ್ಕ ಸೇರಿದಂತೆ ಸುತ್ತಮುತ್ತಲಿನ 5–6 ಗ್ರಾಮಗಳ ಜನರು ಆಧಾರ್ ಸೇವೆಗಳಿಗಾಗಿ ಕಡಬ ಅಥವಾ ಪುತ್ತೂರಿಗೆ 25 ರಿಂದ 30 ಕಿಲೋಮೀಟರ್ ದೂರ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.

ಈ ಪ್ರಯಾಣಕ್ಕೆ ದಿನಗೂಲಿ ಕಳೆದುಕೊಂಡು, ₹300ರಿಂದ ₹500ರವರೆಗೆ ವೆಚ್ಚ ಮಾಡುವ ಪರಿಸ್ಥಿತಿ ಉಂಟಾಗಿದ್ದು, ಸಾಮಾನ್ಯ ಜನರಿಗೆ ಇದು ದೊಡ್ಡ ಹೊರೆ ಆಗಿದೆ. ವಿಶೇಷವಾಗಿ ವೃದ್ಧರು, ಅಂಗವಿಕಲರು, ಗರ್ಭಿಣಿಯರು, ಮಹಿಳೆಯರು ಹಾಗೂ ಶಾಲಾ ಮಕ್ಕಳಿಗೆ ಈ ದೂರ ಪ್ರಯಾಣ ಸಾಧ್ಯವಾಗದೆ, ಆಧಾರ್ ಸಂಬಂಧಿತ ಸೇವೆಗಳು ಸಿಗದೇ ಸಂಕಷ್ಟ ಹೆಚ್ಚಾಗಿದೆ.

ಆಧಾರ್ ತಿದ್ದುಪಡಿ, ಮೊಬೈಲ್ ನಂಬರ್ ಲಿಂಕ್, ವಿಳಾಸ ಬದಲಾವಣೆ, ಹೆಸರು ತಿದ್ದುಪಡಿ ಮುಂತಾದ ಸಣ್ಣ ಕಾರ್ಯಗಳಿಗೂ ದಿನಗಟ್ಟಲೆ ಅಲೆದಾಡಬೇಕಾಗಿದ್ದು, ಇದರ ಪರಿಣಾಮವಾಗಿ ವಿದ್ಯಾರ್ಥಿ ವೇತನ, ವಿಧವಾ ವೇತನ, ವೃದ್ಧಾಪ್ಯ ಪಿಂಚಣಿ ಹಾಗೂ ಪಡಿತರದಂತಹ ಪ್ರಮುಖ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಜನರು ವಿಫಲರಾಗುತ್ತಿದ್ದಾರೆ ಎಂಬುದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ನೆಲ್ಯಾಡಿ ಅಂಚೆ ಕಚೇರಿ ಈ ಭಾಗದ ಕೇಂದ್ರ ಸ್ಥಾನವಾಗಿದ್ದು, ಶಿರಾಡಿ, ಗೋಳಿತೊಟ್ಟು, ಕೌಕ್ರಾಡಿ, ರಂಜಿಲಾಡಿ ಹಾಗೂ ಬಲ್ಕ ಗ್ರಾಮಗಳಿಗೆ ನೇರ ಬಸ್ ಸಂಪರ್ಕವಿರುವುದರಿಂದ ಇಲ್ಲಿ ಆಧಾರ್ ಸೇವಾ ಕೇಂದ್ರ ಆರಂಭಿಸಿದರೆ ಸಾವಿರಾರು ಜನರಿಗೆ ಅನುಕೂಲವಾಗಲಿದೆ ಎಂದು ಕೆ ಆರ್ ಎಸ್ ಪಕ್ಷ ಒತ್ತಾಯಿಸಿದೆ.

ಈ ಹಿನ್ನೆಲೆಯಲ್ಲಿ ನೆಲ್ಯಾಡಿ ಅಂಚೆ ಕಚೇರಿಯನ್ನು ತಕ್ಷಣ ಆಧಾರ್ ಸೇವಾ ಕೇಂದ್ರವಾಗಿ ಗುರುತಿಸಿ, ಅಗತ್ಯ ಸಿಬ್ಬಂದಿ ಹಾಗೂ ಯಂತ್ರೋಪಕರಣಗಳನ್ನು ಒದಗಿಸುವಂತೆ ಹಾಗೂ 15 ದಿನಗಳೊಳಗೆ ಈ ಬಗ್ಗೆ ಲಿಖಿತವಾಗಿ ಮಾಹಿತಿ ನೀಡುವಂತೆ ಪಕ್ಷ ಆಗ್ರಹಿಸಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ, ಕೆ ಆರ್ ಎಸ್ ಪಕ್ಷದ ನೇತೃತ್ವದಲ್ಲಿ ಆರು ಗ್ರಾಮಗಳ ಜನರನ್ನು ಒಳಗೊಂಡು ನೆಲ್ಯಾಡಿ ಅಂಚೆ ಕಚೇರಿ ಮುಂದೆ ಭಾರೀ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ಈ ಬಗ್ಗೆ ಜಿಲ್ಲಾ ಅಧ್ಯಕ್ಷ ವೇಣುಗೋಪಾಲ್, ಜಿಲ್ಲಾ ಕಾರ್ಯದರ್ಶಿ ಸಿಜು, ಶಿವರಾಜ್ ಹಾಗೂ ಕಡಬ ತಾಲೂಕು ಸಮಿತಿ ಕಾರ್ಯದರ್ಶಿ ಸಜಿ ಅವರು ಮನವಿ ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments