ಕುಂಬಳೆ ಅನಂತಪುರ ಶ್ರೀ ಪದ್ಮನಾಭ ದೇವಸ್ಥಾನ : ದೇವರ ಮೊಸಳೆ “ಬಬಿಯಾ” ವಿಧಿವಶ

ಕಾಸರಗೋಡು ಜಿಲ್ಲೆಯ ಕುಂಬಳೆಯ ಅನಂತಪುರ ಶ್ರೀ ಪದ್ಮನಾಭ ದೇವಸ್ಥಾನದ ಕೆರೆಯಲ್ಲಿ ಬಹುಕಾಲದಿಂದ ಇದ್ದ ದೇವರ ಮೊಸಳೆ ಎಂದು ಪ್ರತೀತಿ ಪಡೆದಿದ್ದ ಬಬಿಯಾ ಎಂಬ ಹೆಸರಿನ ಮೊಸಳೆ ಮೃತಪಟ್ಟಿದೆ. ದೇವಸ್ಥಾನದ ನಿತ್ಯದ ಮಧ್ಯಾಹ್ನದ ಪೂಜೆಯ ಬಳಿಕ ಅನ್ನ ನೈವೇದ್ಯವನ್ನು ಮೊಸಳೆಗೆ ಬಡಿಸಲಾಗುತ್ತಿತ್ತು. ದೇವಸ್ಥಾನದ ನೈವೇದ್ಯವನ್ನು ತಿಂದು ಬದುಕುತ್ತಿದ್ದ ಈ ಬಬಿಯಾ ಹೆಸರಿನ ಮೊಸಳೆ ಯಾವತ್ತಿಗೂ ಜನರಿಗೆ ತೊಂದರೆ ಮಾಡಿದ್ದೆ ಇಲ್ಲ. ಕೆಲವೊಮ್ಮೆ ದೇವಸ್ಥಾನದ ಕೆರೆಯಿಂದ ಸಮೀಪದ ಹಳ್ಳವೊಂದಕ್ಕೆ ಹೋಗುತ್ತಿದ್ದ ಮೊಸಳೆ ಬಳಿಕ ಯಥಾ ಪ್ರಕಾರ ದೇವಸ್ಥಾನದ ಕೆರೆಗೆ ಬಂದು ಸೇರುತ್ತಿತ್ತು. ದೇವಸ್ಥಾನದ ಮೊಸಳೆಯನ್ನು ನೋಡಲೆಂದೆ ಎಲ್ಲೆಡೆಯಿಂದ ಜನ ಇಲ್ಲಿಗೆ ಆಗಮಿಸುತ್ತಿದ್ದರು. ಅನಂತಪುರ ದೇವಸ್ಥಾನ ಮೊಸಳೆ ಇರುವ ದೇವಸ್ಥಾನ ಎಂದೇ ಜನಪ್ರಿಯತೆ ಪಡೆದಿತ್ತು.

ಬಬಿಯಾ ಮೊಸಳೆಗಿಂತಲೂ ಮೊದಲು ಬ್ರಿಟಿಷ್ ಕಾಲದಲ್ಲಿ ಇದೇ ದೇವಸ್ಥಾನದ ಕೆರೆಯಲ್ಲಿ ಮೊಸಳೆಯೊಂದಿತ್ತು , ಅಂದಿನ ಕಾಲದಲ್ಲಿ ಸ್ಥಳೀಯವಾಗಿ ಕ್ಯಾಂಪ್ ಹಾಕಿದ್ದ ಬ್ರಿಟಿಷ್ ಅಧಿಕಾರಿಯೊಬ್ಬ ಅಂದಿನ ಮೊಸಳೆಯನ್ನು ಕೊಂದಿದ್ದ ಎಂದು ಹಳೆ ಕಾಲದ ನೆನಪನ್ನು ಸ್ಥಳೀಯರು ಹೇಳುತ್ತಾರೆ.

ಮೊಸಳೆಯನ್ನು ಬ್ರಿಟಿಷ್‌ ಅಧಿಕಾರಿ ಕೊಂದ ಬಳಿಕ ಸ್ವಲ್ಪ ವರ್ಷಗಳ ಬಳಿಕ ದೇವಸ್ಥಾನದ ಕೆರೆಗೆ ಮತ್ತೊಂದು ಮೊಸಳೆ ಬಂದು ಸೇರಿತ್ತು. ಆ ಮೊಸಳೆಗೂ ಬಬಿಯಾ ಎಂದೇ ನಾಮಕರಣ ಮಾಡಲಾಗುತ್ತು. ಅನಂತಪುರ ದೇವಸ್ಥಾನದ ಮೊಸಳೆಯ ಬಗ್ಗೆ ನ್ಯಾಷನಲ್ ಜಿಯಾಗ್ರಪಿ ಚಾನೆಲ್ ಜಗತ್ತಿನ ಅಪರೂಪದ ಸಸ್ಯಹಾರಿ ಮೊಸಳೆ ಎಂಬ ಸಾಕ್ಷ್ಯಚಿತ್ರವೊಂದನ್ನು ಪ್ರಸಾರ ಮಾಡಿತ್ತು. ಆ ಮೂಲಕ ಅನಂತಪುರ ದೇವಸ್ಥಾನ ಹಾಗೂ ಬಬಿಯಾ ಮೊಸಳೆಯ ಬಗ್ಗೆ ಜಗತ್ತಿನ ಗಮನ ಸೆಳೆದಿತ್ತು

ಸೋಮವಾರ ಮಧ್ಯಾಹ್ನ ಬಬಿಯಾ ಮೊಸಳೆಯ ಅಂತ್ಯ ಸಂಸ್ಕಾರವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು. ದೇವಸ್ಥಾನದ ಹೊರ ಪರಿಸರದಲ್ಲಿ ಮೊಸಳೆಯನ್ನು ಮಣ್ಣು ಮಾಡಲಾಯಿತು. ಬೆಳಿಗ್ಗಿನಿಂದಲೇ ಬಬಿಯಾ ಅಂತಿಮ ದರ್ಶನ ಪಡೆಯಲು ಸಾವಿರಾರು ಜನ ಆಗಮಿಸಿದ್ದರು.

Related Posts

Leave a Reply

Your email address will not be published.