ಮಂಗಳೂರು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನ : ಶತಮಾನದ ಶಾರದೋತ್ಸವಕ್ಕೆ ವೈಭವದ ತೆರೆ

ಮಂಗಳೂರಿನ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ 100ನೇ ವರ್ಷದ ಶಾರದಾ ಮಹೋತ್ಸವದಲ್ಲಿ ಪೂಜಿಸಲ್ಪಟ್ಟ ಶ್ರೀ ಶಾರದಾ ಮಾತೆಯ ವಿಸರ್ಜನಾ ಶೋಭಯಾತ್ರೆ ಗುರುವಾರ ರಾತ್ರಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಸರಸ್ವತಿ ಕಲಾ ಮಂಟಪದಲ್ಲಿ ಬೆಳಗ್ಗಿನಿಂದ ಸೇವಾರೂಪದಲ್ಲಿ ಪ್ರತೀ ವರ್ಷದಂತೆ ಶಾರದಾ ಹುಲಿವೇಷಧಾರಿಗಳಿಂದ ಹುಲಿವೇಷ ಕುಣಿತ ನಡೆಯಿತು. ರಾತ್ರಿ ಮಹಾಮಂಗಳಾರತಿ ಆಗಿ ಶ್ರೀ ವೆಂಕಟರಮಣ ದೇವರ ಪ್ರದಕ್ಷಿಣೆ ನಡೆಯಿತು. ಬಳಿಕ ಶ್ರೀ ಶಾರದಾ ಮಾತೆಯ ವಿಸರ್ಜನಾ ಶೋಭಯಾತ್ರೆಯೂ ಉತ್ಸವ ಸ್ಥಾನದಿಂದ ಹೊರಟಿತು.

ಶ್ರೀ ಮಹಾಮಾಯಿ ದೇವಸ್ಥಾನ, ಗದ್ದಕ್ಕೇರಿ, ಕೆನರಾ ಹೈಸ್ಕೂಲ್ ಹಿಂಬದಿ ರಸ್ತೆಯಿಂದ ನವಭಾರತ ವೃತ್ತ, ಅಮ್ಮೆಂಬಳ, ಸುಬ್ಬರಾವ್ ಪೈ ರಸ್ತೆ, ಡೊಂಗರಕೇರಿ, ನ್ಯೂಚಿತ್ರ ಟಾಕೀಸ್, ಬಸವನಗುಡಿ, ಚಾಮರಗಲ್ಲಿ, ರಥಬೀದಿಯಾಗಿ ಶ್ರೀ ಮಹಾಮಾಯಾ ತೀರ್ಥದಲ್ಲಿ ವಿಸರ್ಜನೆ ನಡೆಯಿತು. ಸ್ವಯಂ ಸೇವಕರು ಭುಜ ಸೇವೆಯ ಮೂಲಕ ಶ್ರೀ ಮಾತೆಯ ವಿಗ್ರಹದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು.ವಿವಿಧ ವೇಷಧಾರಿಗಳಿಂದ ವಿಶೇಷ ಟ್ಯಾಬ್ಲೋಗಳು, ಹರಕೆಯ ಶಾರದಾ ಹುಲಿವೇಷ ಟ್ಯಾಬ್ಲೋಗಳು ಜನಾಕರ್ಷಣೆಯ ಕೇಂದ್ರವಾಗಿದ್ದವು.

ಶ್ರೀ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷ ಡಾ. ಉಮಾನಂದ ಮಲ್ಯ, ಕಾರ್ಯದರ್ಶಿ ಅಡಿಗೆ ಬಾಲಕೃಷ್ಣ ಶೆಣೈ, ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು, ಅಚಾರ್ಯ ಮಠದ ಪಂಡಿತ್ ನರಸಿಂಹ ಅಚಾರ್ಯ, ಶ್ರೀ ವೆಂಕಟರಮಣ ದೇಗುಲದ ಮೊಕ್ತೇಸರರಾದ ಸಾಹುಕಾರ್ ಕಿರಣ್ ಪೈ, ಸತೀಶ್ ಪ್ರಭು, ಗಣೇಶ್ ಕಾಮತ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.