ಮಂಗಳೂರು: ಫೆ.21ಕ್ಕೆ ಭಾವನೆಗಳೇ ಜೀವಾಳವಾಗಿರುವ “ಭಾವ ತೀರ ಯಾನ” ತೆರೆಗೆ!

ಮಂಗಳೂರು: ಆರೋಹ ಫಿಲಂಸ್ ಬ್ಯಾನರ್‌ನ ಅಡಿಯಲ್ಲಿ ಶೈಲೇಶ್ ಅಂಬೆಕಲ್ಲು ಹಾಗೂ ಲಕ್ಷ್ಮಣ ಬಿ.ಕೆ ನಿರ್ಮಿಸಿರುವ ‘ಭಾವ ತೀರ ಯಾನ’ ಸಿನಿಮಾ ಇದೇ ತಿಂಗಳ 21ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ“ ಎಂದು ಚಿತ್ರ ನಿರ್ದೇಶಕ ಮಯೂರ್ ಅಂಬೆಕಲ್ಲು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.


ತಾರಾಗಣದಲ್ಲಿ ರಮೇಶ್ ಭಟ್, ವಿದ್ಯಾಮೂರ್ತಿ, ತೇಜಸ್ ಕಿರಣ್, ಆರೋಹಿ ನೈನ, ಅನೂಷಾ ಕೃಷ್ಣ, ಚಂದನಾ ಅನಂತಕೃಷ್ಣ, ಸಂದೀಪ್ ರಾಜಗೋಪಾಲ್, ಸಿತಾರಾ, ಶ್ರೀನಿವಾಸ ಕೆಸ್ತೂರ್, ಶಮಾತ್ಮಿಕ, ವಿಭಾ ಡೊಂಗ್ರೆ ಮುಂತಾದವರು ನಟಿಸುತ್ತಿದ್ದಾರೆ.
ಪ್ರೀತಿ ಎಂಬ ವಿಷಯದ ಸುತ್ತ ಸಾಗುವ ಚಿತ್ರ ‘ಭಾವ ತೀರ ಯಾನ’. ಸುಂದರವಾದ ಪ್ರೇಮಕಥೆಯನ್ನು ಹೊಂದಿರುವಂತಹ ಚಿತ್ರ ಇದಾಗಿದ್ದು, 6 ವರ್ಷದಿಂದ 60 ವರ್ಷದವರೆಗಿನ ಪ್ರತಿಯೊಬ್ಬರಿಗೂ ಆಪ್ತವೆನಿಸುವಂತಹ ರೀತಿಯಲ್ಲಿ ಮೂಡಿಬಂದಿದೆ. ಪ್ರೀತಿಯ ಹೊಸ ಆಯಾಮವನ್ನು ಸಂಪೂರ್ಣ ಮನೋರಂಜನೆಯ ಮೂಲಕ ಪ್ರೇಕ್ಷಕರ ಮುಂದಿಡಲು ಚಿತ್ರತಂಡ ಸಜ್ಜಾಗಿದೆ. ಹಲವಾರು ಭಾವನಾತ್ಮಕ ಅಂಶಗಳು ಈ ಚಿತ್ರದಲ್ಲಿ ಇರುವುದರಿಂದ ಈ ಚಿತ್ರಕ್ಕೆ ಹೊಂದುವಂತಹ ‘ಭಾವ ತೀರ ಯಾನ’ ಎಂಬ ಹೆಸರನ್ನು ಇಡಲಾಗಿದೆ. 20 ದಿನಗಳು ಚಿತ್ರೀಕರಣ ನಡೆದಿದ್ದು, ಬೆಂಗಳೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಸಕಲೇಶಪುರ, ಮಂಗಳೂರು, ಸುಳ್ಯ ಮುಂತಾದ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.


ನಿರ್ದೇಶನದಲ್ಲಿ ತೇಜಸ್ ಕಿರಣ್ ಜೊತೆಯಾಗಿದ್ದಾರೆ. ಶಿವಶಂಕರ್ ನೂರಂಬಡ ಛಾಯಾಗ್ರಹಣ, ಮಯೂರ್ ಅಂಬೆಕಲ್ಲು ಸಂಗೀತ, ಸುಪ್ರೀತ್ ಸಂಕಲನ, ವಿಶಾಕ್ ನಾಗಲಪುರ ಸಂಭಾಷಣೆ, ಮಯೂರ್ ನಾಯ್ಕ ಹಾಗೂ ಭಾನುಪ್ರಕಾಶ್ ಜೋಯ್ಸ್ ಸಾಹಿತ್ಯವಿದೆ. ಈ ಚಿತ್ರವನ್ನು ‘ಶಾಖಾಹಾರಿ’ ಸಿನಿಮಾ ನಿರ್ಮಾಣ ಮಾಡಿದ ಕೀಳಂಬಿ ಮೀಡಿಯಾ ಲ್ಯಾಬ್ ಪ್ರಸ್ತುತಪಡಿಸುತ್ತಿದ್ದು, ಜನನಿ ಪಿಕ್ಚರ್ಸ್ ರಾಜ್ಯಾದ್ಯಂತ ವಿತರಣೆ ಮಾಡುತ್ತಿದೆ.
ಪತ್ರಿಕಾಗೋಷ್ಟಿಯಲ್ಲಿ ನಟ ತೇಜಸ್ ಕಿರಣ್, ನಟಿಯರಾದ ಆರೋಹಿ ನೈನಾ, ಅನುಷಾ ಕೃಷ್ಣ, ಶೈಲೇಶ್ ಅಂಬೆಕಲ್ಲು ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.