ಮಂಗಳೂರು: ಭಂಡಾರಿ ಫೌಂಡೇಶನ್ ವತಿಯಿಂದ “ಗುರುವಂದನೆ”
ಮಂಗಳೂರು: “ಶಿಕ್ಷಕರು ಸಮಾಜದಲ್ಲಿ ನಂಬಿಕೆ ಮತ್ತು ಅತ್ಯಂತ ಹೆಚ್ಚು ಗೌರವದ ಸ್ಥಾನಮಾನಕ್ಕೆ ಅರ್ಹರಾಗಿದವರು. ಆ ಸ್ಥಾನಮಾನ ಮುಂದೆಯೂ ಉಳಿಯುವಂತಾಗಲಿ“ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಅವರು ಗುರುವಾರ ಸಂಜೆ ಅಡ್ಯಾರ್ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಭಂಡಾರಿ ಫೌಂಡೇಶನ್ ವತಿಯಿಂದ ಜರುಗಿದ ಶಿಕ್ಷಕರ ದಿನಾಚರಣೆ ಮತ್ತು ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
“ಶಿಕ್ಷಕ ವೃತ್ತಿ ಎನ್ನುವುದು ಸನ್ಯಾಸತ್ವ ಸ್ವೀಕಾರ ಮಾಡಿದಂತೆ. ಒಬ್ಬ ಸ್ಫೂರ್ತಿ ತುಂಬುವ ಶಿಕ್ಷಕನ ಮೂಲಕ ಆ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶದಲ್ಲಿ ಗುರುತಿಸಲ್ಪಡುವುದನ್ನು ನಾವು ಕಾಣುತ್ತೇವೆ. ಶಿಕ್ಷಕರ ದಿನದ ಇಂತಹ ಅರ್ಥಪೂರ್ಣ ಕಾರ್ಯಕ್ರಮವು ನನ್ನ ಬಾಲ್ಯದ ದಿನ, ನನಗೆ ಶಿಕ್ಷಣ ನೀಡಿದ ಗುರುಗಳನ್ನು ನೆನಪಿಸಿಕೊಳ್ಳಲು ಅವಕಾಶ ಕೊಟ್ಟಿತು. ನನ್ನ ಬದುಕಿನಲ್ಲಿ ತಾಯಿ, ತಂದೆಯ ಹಾಗೇ ಗುರುಗಳು ಅತ್ಯಂತ ಹೆಚ್ಚು ಪ್ರಭಾವ ಬೀರಿದವರು. ನಾನು ಕಲಿತ ಬೆಂಜನ ಪದವು ಶಾಲೆಗೆ ಸಮುದಾಯ ಭವನ ನಿರ್ಮಾಣ, ಕ್ರೀಡಾಂಗಣ ಕೆಲಸ ಆರಂಭಿಸಿದ್ದೆ ಅದನ್ನು ಪೂರ್ಣ ಗೊಳಿಸಬೇಕೆನ್ನುವ ಕನಸಿದೆ. ಸರಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುವುದು ಉತ್ತಮ ಯೋಜನೆ. ಅದಕ್ಕೆ ನಾವೆಲ್ಲರೂ ಬೆಂಬಲ ನೀಡೋಣ“ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡುತ್ತಾ “ಗುರುಗಳಿಗೆ ಸಮಾಜದಲ್ಲಿ ತಂದೆ ತಾಯಿಗಳಿಗೆ ಇರುವಂತೆ ಎತ್ತರದ ಸ್ಥಾನವಿದೆ. ಬಾಲ್ಯದ ಸಹಪಾಠಿಗಳು ಬಹಳ ವರ್ಷಗಳ ನಂತರ ಒಂದು ಕಡೆ ಸಿಕ್ಕಾಗ ಬಹಳ ಸಂತೋಷ ವಾಗುತ್ತದೆ. ಅಂತಹ ಅವಕಾಶ ಇಂದು ದೊರೆತಿದೆ ಎಂದು ತನಗೆ ಕಲಿಸಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸಿದರು.
ವಿಧಾನ ಪರಿಷತ್ ಶಾಸಕ, ಅಡ್ಯಾರ್ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮಂಜುನಾಥ ಭಂಡಾರಿಯವರು ಮಾತನಾಡುತ್ತಾ, ನನ್ನ ಬದುಕಿನಲ್ಲಿ ಹೆಚ್ಚು ಪ್ರಭಾವ ಬೀರಿದ ಮತ್ತು ಬದುಕನ್ನು ರೂಪಿಸಲು ಕಾರಣಕರ್ತರಾದ ಶಿಕ್ಷಕರನ್ನು ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಗೌರವಿಸಬೇಕೆನ್ನುವ ಹಿನ್ನೆಲೆಯಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಬಾಲ್ಯದ ಸಹಪಾಠಿಗಳ ಜೊತೆಗೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಬೆಂಗ್ರೆಯ ಸರಕಾರಿ ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಅದನ್ನು ಮಾದರಿ ಶಾಲೆಯಾಗಿ ಅಭಿವೃದ್ಧಿ ಪಡಿಸುವ ಇಚ್ಛೆಯನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್ ಪ್ರಾಂಶುಪಾಲ, ಡಾ.ಎಸ್.ಎಸ್. ಇಂಜನಗೇರಿ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕರಾದ ಲೂಸಿ ಕಾನ್ಸೆಪ್ಟಾ ಕೊಯೆಲ್ಲೋ, ಸದಾನಂದ ಬಿ.ಎಚ್, ಅನಂತರಾಮ ಹೇರಳೆ, ಭಗವಾನ್ ದಾಸ್, ಮಹಾಬಲ ಭಂಡಾರಿ ಉಪಸ್ಥಿತರಿದ್ದರು.
ಸ್ಮಿತಾ ಶೆಣೈ,ಅಕ್ಷಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.