ದ.ಕ ಜಿಲ್ಲೆಯ ಹದಗೆಟ್ಟಿರುವ ಹೆದ್ದಾರಿಗಳನ್ನು ಶೀಘ್ರ ದುರಸ್ತಿ ಗೊಳಿಸಲು ಎಸ್‌ಡಿಪಿಐ ಒತ್ತಾಯ
ಮಂಗಳೂರು,:- ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಹಲವು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ತೀವ್ರ ಹದಗೆಟ್ಟಿದ್ದು,ವಾಹನ ಸವಾರರಿಗೆ ಸಂಚರಿಸಲು ಅಯೋಗ್ಯವಾಗಿದೆ ಹಾಗಾಗಿ ಹತ್ತು ದಿನಗಳ ಒಳಗಾಗಿ ದುರಸ್ತಿ ಕಾರ್ಯ ಆರಂಬಿಸಬೇಕು ಇಲ್ಲದಿದ್ದಲ್ಲಿ ಪಕ್ಷದ ನೇತೃತ್ವದಲ್ಲಿ ಸಾರ್ವಜನಿಕರ ಸಹಭಾಗಿತ್ವ ದೊಂದಿಗೆ ಹೆದ್ದಾರಿ ಬಂದ್ ನಡೆಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಸ್‌ಡಿಪಿಐ ದ.ಕ ಜಿಲ್ಲಾ ಪ್ರದಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಪತ್ರಿಕಾ ಪ್ರಕಟಣೆಯಲ್ಲಿ ಜಿಲ್ಲಾಡಳಿತವನ್ನು ಎಚ್ಚರಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಗೊಳಿಸಿರುವ ಅವರು ನಾವು ಈಗಾಗಲೇ ಜಿಲ್ಲಾಧಿಕಾರಿ, ಸಂಸದರು, ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವರಿಗೆ ಪತ್ರ ಬರೆದು ಬೇಡಿಕೆ ಸಲ್ಲಿಸಿದ್ದೇವೆ,ಹತ್ತು ದಿನಗಳ ಒಳಗಾಗಿ ದುರಸ್ತಿ ಕಾರ್ಯ ಆರಂಬಿಸಬೇಕು ಹದಗೆಟ್ಟ ರಸ್ತೆಗಳಿಗೆ ಶಾಶ್ವತವಾದ ದುರಸ್ತಿಗೆ ಅವರು ಆಗ್ರಹಿಸಿದ್ದಾರೆ.
ವಾಹನ ಸಂಚಾರ ಹೆಚ್ಚಾಗಿರುವ ಪ್ರಮುಖ ಹೆದ್ದಾರಿಗಳಾದ ಮಂಗಳೂರು- -ಬೆಂಗಳೂರು, ಮಂಗಳೂರು -ಮೈಸೂರು ಬಂಟ್ವಾಳ-ಚಾರ್ಮಾಡಿ ಸೇರಿದಂತೆ ಹಲವಾರು ರಸ್ತೆಗಳು ತೀವ್ರ ಹದಗೆಟ್ಟು ದ್ವಿಚಕ್ರ ಹಾಗೂ ಇತರ ವಾಹನ ಸವಾರರಿಗೆ ಸಂಚರಿಸಲು ಸಾಧ್ಯ ಇಲ್ಲದಂತಹ ಪರಿಸ್ಥಿತಿ ಇದೆ. ಮಂಗಳೂರಿನಲ್ಲಿ ರಸ್ತೆಯಲ್ಲಿನ ಹೊಂಡ ಗುಂಡಿಯ ಕಾರಣದಿಂದ ಇತ್ತೀಚೆಗೆ ಕಾಲೇಜು ವಿಧ್ಯಾರ್ಥಿಯೊಬ್ಬ ಬೈಕ್ ನಿಂದ ಬಿದ್ದು ಸಾವನ್ನಪ್ಪಿದ ಘಟನೆ ಕೂಡ ನಡೆದಿದೆ,ಅದಲ್ಲದೇ ಇತರ ರಸ್ತೆ ಗಳಲ್ಲಿ ಕೂಡ ತುರ್ತಾಗಿ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ಕೂಡ ಕಷ್ಟ ಪಡುವಂತಾಗಿದೆ. ಮಳೆಗಾಲ ಮುಗಿತಾ ಬಂದರು ರಸ್ತೆ ದುರಸ್ತಿ ಕಾರ್ಯಕ್ಕೆ ಹೆದ್ದಾರಿ ಇಲಾಖೆ ಮುಂದಾಗದೇ ವಾಹನ ಸವಾರರ ಮತ್ತು ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ ವಾಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯದಿಕ ಮಳೆಯಾಗುವುದು ಸಹಜವಾಗಿದೆ ಇಂತಹ ಕಡೆಗಳಲ್ಲಿ ವಿಶೇಷ ತಂತ್ರಜ್ಞಾನ ಬಳಸಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕಾದದ್ದು ಸರಕಾರದ ಕರ್ತವ್ಯವಾಗಿದೆ. ಮಾತು ಮಾತಿಗೂ ಡಬ್ಬಲ್ ಇಂಜಿನ್ ಸರಕಾರ ಎಂದು ಬೊಗಳೆ ಬಿಡುತ್ತಿರುವ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರ ಇಂಜಿನ್ ಈವಾಗ ತುಕ್ಕು ಹಿಡಿದು ನಿಂತಿದೆ , ದಪ್ಪ ಚರ್ಮದ ಸರಕಾರಕ್ಕೆ ಇದೀಗ ಡಬ್ಬಲ್ ಇಂಜಿನ್ ಬಿಟ್ಟು ಸಿಂಗಲ್ ಇಂಜಿನ್ ಕೂಡಾ ಇಲ್ಲ ಎಂದು ಅನ್ವರ್ ಸಾದತ್ ವ್ಯಂಗ್ಯವಾಡಿದ್ದಾರೆ
ಮಳೆಗಾಲದಲ್ಲಿ ದುರಸ್ತಿ ಕಾರ್ಯ ಅಸಾಧ್ಯ ಎಂಬ ಮಾತನ್ನು ಅಧಿಕಾರಿಗಳು ನೀಡಬಾರದು. ಯಾಕೆಂದರೆ ಯಾವುದೇ ಮಳೆ ಬಿಸಿಲು ಏನೇ ಅಡೆತಡೆ ಇದ್ದರು ರಸ್ತೆ ದುರಸ್ತಿ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಆಗಮನ ಸಂದರ್ಭದಲ್ಲಿ ತೀರ ಹದಗೆಟ್ಟಿದ್ದ ಕೂಳೂರು ರಸ್ತೆಯನ್ನು ದುರಸ್ತಿ ನಡೆಸಿ ಜಿಲ್ಲೆಯ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ತೋರಿಸಿಕೊಟ್ಟಿದ್ದಾರೆ. ಹಾಗಾಗಿ ರಸ್ತೆ ದುರಸ್ತಿ ಗೆ ಬೇಕಾದದ್ದು ಬೇಸಿಗೆ ಕಾಲ ವಲ್ಲ ಬದಲಿಗೆ ಜನಪ್ರತಿನಿದಿಗಳಿಗೆ ಮತ್ತು ಅಧಿಕಾರಿಗಳಿಗೆ ಬದ್ದತೆ,ಆಸಕ್ತಿ ಹಾಗೂ ಕರ್ತವ್ಯ ನಿಷ್ಠೆಯಾಗಿದೆ ಎಂದರು. ಸರ್ಕಾರವು ಪೆಟ್ರೋಲ್ ಮೂಲಕ ಅದರ ಮೂಲ ಬೆಲೆಗಿಂತ ಮೂರು ಪಟ್ಟು ಅಧಿಕ ತೆರಿಗೆ ರೂಪದಲ್ಲಿ ಪಡೆಯುತ್ತಿದೆ,ವಾಹನಗಳ ಬಿಡಿ ಭಾಗಗಳಿಗೆ ದರ ಕೂಡ ಹೆಚ್ಚು ಮಾಡಲಾಗಿದೆ,ರಿಕ್ಷಾ ಚಾಲಕರಿಗೆ,ಟೂರಿಸ್ಟ್ ವಾಹನಗಳಿಗೆ, ದುಡಿಯವಂತಹ ಜನರಿಗೆ ವಾಹನ ದುರಸ್ತಿಯೇ ದೊಡ್ಡ ಸವಾಲಾಗಿದೆ,ಬದುಕು ದುಸ್ತರವಾಗಿದೆ. ಮೋದಿ ಬರುವ ಸಂದರ್ಭದಲ್ಲಿ ರಸ್ತೆಗೆ ತೇಪೆ ಹಚ್ಚಲು ದುಡ್ಡಿದೆ,ಜನ ಸಾಮನ್ಯರು ದಿನ ನಿತ್ಯ ಸಂಚರಿಸುವ ರಸ್ತೆಯನ್ನು ದುರಸ್ತಿ ಗೊಳಿಸಲು ದುಡ್ಡಿಲ್ವಾ ಎಂದು ಪ್ರಶ್ನಿಸಿದರು.
ಕೆಲವು ಕಡೆಗಳಲ್ಲಿ ಮಳೆಗಾಲಕ್ಕೆ ಕೆಲವು ದಿನಗಳ ಮುಂಚಿತವಾಗಿ ನಡೆಸಿದ ರಸ್ತೆಗಳು ಕೂಡ ಕೆಟ್ಟು ಹೋಗಿದೆ,ಇದಕ್ಕೆ ಸರ್ಕಾರದ 40% ಕಮಿಷನ್ ದಂದೆ ಕಾರಣ ಹಾಗೂ ಕೆಲವು ದಿನಗಳ ಹಿಂದೆ ದೇರಳಕಟ್ಟೆಯಲ್ಲಿ ನಡೆಸಿದ ರಸ್ತೆ ಕಾಮಾಗಾರಿಯೂ ಕೆಲವು ದಿನಗಳಲ್ಲೇ ಹಾಳಾಗಿ ಹೊಂಡ ಗುಂಡಿಗಳು ಬಿದ್ದಿವೆ,ಇದಕ್ಕೆ 40% ಗಿಂತಲೂ ಅಧಿಕ ಕಮಿಷನ್ ದಂದೆ ನಡೆದಿದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಗಾಗಿ ಹದಗೆಟ್ಟ ದ.ಕ ಜಿಲ್ಲೆಯ ಎಲ್ಲಾ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಹತ್ತು ದಿವಸಗಳ ಒಳಗಾಗಿ ದುರಸ್ತಿ ನಡೆಸಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರಸ್ತೆ ಬಂದ್ ನಡೆಸಿ ಬೃಹತ್ ಹೋರಾಟ ನಡೆಸುವುದು ನಿಶ್ಚಿತ ಎಂದು ಅವರು ಎಚ್ಚರಿಸಿದ್ದಾರೆ.