ಭಾರತದ ಯುವ ಶಕ್ತಿಗೆ ಮಣಿಪಾಲ ಗ್ರೂಪ್ ಸಂಸ್ಥೆಯ ಕೊಡುಗೆ ಅಪಾರ : ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಡುಪಿ ಜಿಲ್ಲೆಗೆ ಪ್ರವಾಸವನ್ನು ಕೈಗೊಂಡು ಇಂದು ಶುಕ್ರವಾರದಂದು ಉಡುಪಿಗೆ ಆಗಮಿಸಿದ್ದು, ಮಣಿಪಾಲದ ಮಾಹೆ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಣಿಪಾಲದ ಮಾಹೆ ಸಂಸ್ಥೆ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸೇವೆಯನ್ನು ಶ್ಲಾಘಿಸುತ್ತಾ, ತಮ್ಮ ವಿದ್ಯಾರ್ಥಿ ದಿನಗಳನ್ನು ನೆನಪಿಸಿಕೊಂಡರು. ಮಾಹೆ ಸಂಸ್ಥೆ ಶೈಕ್ಷಣಿಕ ಹಾಗೂ ಸಂಶೋಧನೆ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಗೌರವವನ್ನು ಪಡೆದಿದೆ ಹಾಗೂ ಭಾರತದ ಯುವ ಶಕ್ತಿಗೆ ಮಣಿಪಾಲ ಗ್ರೂಪ್ ಸಂಸ್ಥೆಯ ಕೊಡುಗೆ ಮೆಚ್ಚುವಂತದ್ದು ಎಂದರು.
ಕರ್ನಾಟಕದಂತಹ ಪುಣ್ಯಭೂಮಿಯ ಅದೆಷ್ಟೋ ಮೇರು ವ್ಯಕ್ತಿತ್ವಗಳು, ವಿಶ್ವ ಮಟ್ಟದಲ್ಲಿ ಭಾರತದ ಸ್ಥಾನವನ್ನು ಎತ್ತರಕ್ಕೆ ಕೊಂಡುಹೋಗಿದ್ದಾರೆ. ಕರ್ನಾಟಕದ ಬಸವೇಶ್ವರ, ಅಕ್ಕಮಹಾದೇವಿ, ಕನಕದಾಸರು, ಎಮ್. ವಿಶ್ವೇಶ್ವರಯ್ಯ ಮತ್ತು ಕೆ. ಎಮ್. ಕರಿಯಪ್ಪ ಅವರು ತಮ್ಮ ತಮ್ಮ ಕ್ಷೇತ್ರದಲ್ಲಿ ನೀಡಿದಂತಹ ಅತ್ಯುನ್ನತ ಕೊಡುಗೆಯನ್ನು ಹೊಗಳಿದರು.
ತದನಂತರ ಜ್ಞಾನವನ್ನು ಮತ್ತು ವಿವೇಕವನ್ನು ನಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಮತ್ತು ಶಿಕ್ಷಣದ ಮಹತ್ವವನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಭಾರತೀಯ ವೈದ್ಯಕೀಯ ವೈದ್ಯರು, ಉದ್ಯಮಿ ಮತ್ತು ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಗುಂಪಿನ ಅಧ್ಯಕ್ಷರಾದ ಡಾ. ರಂಜನ್ ಆರ್. ಪೈ, ಮಹಾರಾಷ್ಟ್ರದ ರಾಜ್ಯಪಾಲರ ನಾಸಿಕ್‌ನ ಮಹಾರಾಷ್ಟ್ರ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿಯಾದ ಲೆಫ್ಟಿನೆಂಟ್ ಜನರಲ್ ಡಾ. ಮಾಧುರಿ ಕಾನಿಟ್ಕರ್, ಮಾಹೆಯ ಉಪಕುಲಪತಿಗಳಾದ ಎಚ್. ಎಸ್. ಬಲ್ಲಾಳ್, ಮಾಹೆಯ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ ಡಾ. ಎಮ್. ಆರ್. ವೆಂಕಟೇಶ್ ಉಪಸ್ಥಿತರಿದ್ದರು.
ವರದಿ: ಉಡುಪಿ