ಮಂಜೇಶ್ವರ: ಆಟೋ ಚಾಲಕ ಮುಹಮ್ಮದ್ ಶರೀಫ್ ಸಾವು ಪ್ರಕರಣ: ಕೊಲೆಗೈದು ಬಾವಿಗೆ ಎಸೆದಿರುವ ದುಷ್ಕರ್ಮಿಗಳು: ಮರಣೋತ್ತರ ಪರೀಕ್ಷೆಯಲ್ಲಿ ದೃಢ

ಕುಂಜತ್ತೂರು ಪದವು ಎಂಬಲ್ಲಿ ಮುಲ್ಕಿ ಕೊಲ್ನಾಡು ನಿವಾಸಿ ಆಟೋ ಚಾಲಕ ಮುಹಮ್ಮದ್ ಶರೀಫ್ (೫೨) ಅವರ ನಿಗೂಡ ಸಾವು ಕೊಲೆ ಕೃತ್ಯ ಎಂದು ಪ್ರಾಥಮಿಕ ಹಂತದ ಮರಣೋತ್ತರ ಪರೀಕ್ಷಾ ವರದಿ ತಿಳಿಸಿದೆ.
ಮರಣೋತ್ತರ ಪರೀಕ್ಷಾ ವರದಿಯಲ್ಲಿ ಮುಹಮ್ಮದ್ ಶರೀಫ್ ರ ಕುತ್ತಿಗೆ ಹಾಗೂ ತಲೆಗೆ ಗಾಯಗಳಾಗಿರುವುದು ಸಾವಿಗೆ ಕಾರಣವೆಂದು ಸೂಚಿಸಲಾಗಿದೆ. ಗುರುವಾರ ಕುಂಜತ್ತೂರು ಅಡ್ಡ ಪದವು ಎಂಬಲ್ಲಿನ ನಿರ್ಜನ ಪ್ರದೇಶದ ಬಾವಿಯಲ್ಲಿ ಮುಹಮ್ಮದ್ ಶರೀಫ್ ರ ಶವ ಪತ್ತೆಯಾಗಿತ್ತು. ಅದರ ಪಕ್ಕದಲ್ಲೇ ಅವರು ಚಲಾಯಿಸುತಿದ್ದ ಆಟೋ ರಿಕ್ಷಾ ಕೂಡಾ ಪತ್ತೆಯಾಗಿತ್ತು.
ಶವ ಪತ್ತೆಯಾದ ಪರಿಸರದಲ್ಲಿ ವ್ಯಾಪಾಕ ಜೂಜಾಟ ದಂಧೆ ನಡೆಯಿತಿದ್ದು ರಾತ್ರಿ ಹಗಲು ಎನ್ನದೆ ಭಾರೀ ಸಂಖ್ಯೆಯಲ್ಲಿ ಇಲ್ಲಿಗೆ ವಿವಿಧೆಡೆಗಳಿಂದ ಆಗಮಿಸುತಿದ್ದರೆಂದು ಸ್ಥಳೀಯರು ಹೇಳುತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾದಕ ವ್ಯಸನಿಗಳು ಕೊಲೆಗೈದಿರಬೇಕು ಎಂಬ ಶಂಕೆ ವ್ಯಾಪಕವಾಗಿದೆ.
ಮುಹಮ್ಮದ್ ಶರೀಫ್ ತನ್ನ ರಿಕ್ಷಾವನ್ನು ನಗರದ ಕೊಟ್ಟಾರ ಚೌಕಿಯಲ್ಲಿ ಪಾರ್ಕಿಂಗ್ ಮಾಡುತ್ತಿದ್ದು, ಬುಧವಾರ ಎಂದಿನಂತೆ ತನ್ನ ಮನೆಯಿಂದ ಕೊಟ್ಟಾರ ಚೌಕಿಗೆ ಬಂದಿದ್ದರು. ಆದರೆ ಎಂದಿನಂತೆ ವಾಪಸ್ ಮನೆಗೆ ಬಾರದ ಕಾರಣ ಮತ್ತು ಮೊಬೈಲ್ ಕೂಡ ಸಂಪರ್ಕಕ್ಕೆ ಸಿಗದ ಕಾರಣ ಮನೆ ಮಂದಿ ಆತಂಕ ಗೊಂಡಿದ್ದರು. ಅಲ್ಲದೆ ಪೊಲೀಸರಿಗೂ ಮಾಹಿತಿ ನೀಡಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಕಾಣೆಯಾಗಿರುವ ಬಗ್ಗೆ ಸಂದೇಶ ರವಾನಿಸಲಾಗಿತ್ತು.
ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿರುವ ಮುಹಮ್ಮದ್ ಶರೀಫ್ ದಿನಾ ಬೆಳಗ್ಗೆ ೧೦ ಗಂಟೆಗೆ ತನ್ನ ಮನೆಯಿಂದ ಕೊಟ್ಟಾರ ಚೌಕಿಗೆ ಬಂದು ಬಾಡಿಗೆಗೆ ರಿಕ್ಷಾ ಓಡಿಸುತ್ತಾರೆ. ತಡರಾತ್ರಿಯಾದರೂ ಸರಿ, ಮನೆಗೆ ಮರಳುತ್ತಾರೆ. ಆದರೆ ಬುಧವಾರ ಬೆಳಗ್ಗೆ ಮನೆಯಿಂದ ಹೊರಟು ಮಂಗಳೂರಿಗೆ ಬಂದಿದ್ದ ಮುಹಮ್ಮದ್ ಶರೀಫ್ ಗುರುವಾರ ತಡರಾತ್ರಿಯವರೆಗೂ ಮನೆಗೆ ಮರಳಲಿಲ್ಲ ಎನ್ನಲಾಗಿದೆ.