ಸಂಕಷ್ಟ ಪರಿಹಾರ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ಕೊರಗಜ್ಜ ದೈವದ ಮೊರೆ ಹೋದ ಶಾಸಕ ವಿನಯ್ ಕುಲಕರ್ಣಿ!

ಉಳ್ಳಾಲ: ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಕೊರಗಜ್ಜನ ಕಟ್ಟೆಯಲ್ಲಿ ಧಾರವಾಡ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿಯಿಂದ ಸಂಕಷ್ಟ ಪರಿಹಾರ ಹಾಗೂ  ಇಷ್ಟಾರ್ಥ ಸಿದ್ಧಿಗಾಗಿ ಕೊರಗಜ್ಜ ದೈವಕ್ಕೆ ಹರಕೆ ಕೋಲ ಸೇವೆಯು ಶನಿವಾರದಂದು ನಡೆಯಿತು.

ಈ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಇವರು ಚುನಾವಣಾ ಪೂರ್ವದಲ್ಲಿಯೇ ಕಾಂಗ್ರೆಸ್ ನಾಯಕರು ಹಾಗೂ ಮಂಗಳೂರಿನ ನನ್ನ ಸ್ನೇಹಿತರು ಕೋಲ ಸೇವೆ ಕೊಡುವ ಬಗ್ಗೆ ಹೇಳಿದ್ದರು.ಈಗ ಘಳಿಗೆ ಕೂಡಿ ಬಂದ ಹಿನ್ನೆಲೆ ಕೋಲ ಸೇವೆ ಕೊಟ್ಟಿದ್ದೇನೆ. ಕುಟುಂಬ ಸಮೇತರಾಗಿ ಬಂದು ಕೋಲ ಸೇವೆಯಲ್ಲಿ ಭಾಗಿಯಾಗಿದ್ದೇನೆ ಎಂದರು.

ಕೋಲದಲ್ಲಿ ಶಾಸಕ ಕುಲಕರ್ಣಿ ಮತ್ತು ಕುಟುಂಬಸ್ಥರು ರಾಜೀವ್ ಗಾಂಧಿ ರಾಜ್ಯ ಅಲೈಡ್ ಎಂಡ್ ಹೆಲ್ತ್ ಕೇರ್ ಕೌನ್ಸಿಲ್ ಸದಸ್ಯ ಇಫ್ತಿಕಾರ್ ಆಲಿ ಭಾಗಿಯಾಗಿದ್ದರು.

ಬಿಜೆಪಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಆರೋಪಿಯಾಗಿದ್ದು  ಈ ಸಂಬಂಧ ಸಿಬಿಐ ನ್ಯಾಯಾಲಯ ವಿನಯ್ ಕುಲಕರ್ಣಿಗೆ ಧಾರವಾಡ ಕ್ಷೇತ್ರ ಪ್ರವೇಶಿಸದಂತೆ ನಿರ್ಬಂಧ ಹೇರಿತ್ತು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಕ್ಷೇತ್ರಕ್ಕೆ ಭೇಟಿ ನೀಡದೆಯೇ ಬಿಜೆಪಿ ಅಭ್ಯರ್ಥಿ ವಿರುದ್ಧ ಗೆದ್ದಿದ್ದರು. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಕ್ಷೇತ್ರ ಪ್ರವೇಶಕ್ಕೆ ನಿರ್ಬಂಧ ಮುಂದುವರಿದಿದೆ. ಮುಂದಿನ ತಿಂಗಳು ಇದೇ ವಿಚಾರದಲ್ಲಿ ಕೋರ್ಟ್ ವಿಚಾರಣೆಯಿದ್ದು ಈ ಎಲ್ಲಾ ಬೆಳವಣಿಗೆಗಳ ನಡುವೆ ಕೋಲ ಸೇವೆಯನ್ನು ವಿನಯ್ ಕುಲಕರ್ಣಿ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

Related Posts

Leave a Reply

Your email address will not be published.