ಪುತ್ತೂರು: ಪತಿಯಿಂದ ಪತ್ನಿಗೆ ಚೂರಿ ಇರಿತ: ಆಸ್ಪತ್ರೆಗೆ ದಾಖಲು
ಪುತ್ತೂರು : ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಚೂರಿಯಿಂದ ಇರಿದ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಬರುವ ಬೆಳ್ತಂಗಡಿ ಗ್ರಾಮದ ಕಣಿಯಾರು ಗ್ರಾಮದ ಜೋರುಕಟ್ಟೆ ಎಂಬಲ್ಲಿ ನಡೆದಿದೆ.
ಜೋರುಕಟ್ಟೆ ನಿವಾಸಿ ಮೊಹಮ್ಮದ್ ಎಂಬವರ ಪುತ್ರಿ ಸಜರಾ (40) ಹಲ್ಲೆಗೊಳಗಾದವರು. ಆಕೆಯ ಪತಿ ಮಡಂತ್ಯಾರು ಸಮೀಪದ ಕೊಲತ್ತಬೈಲು ಮಾಲಾಡಿ ನಿವಾಸಿ ಹಕೀಂ ಎಂಬಾತ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.
ಹಕೀಂ ಮತ್ತು ಸಜರಾ ಅವರ ವಿವಾಹ 15 ವರ್ಷಗಳ ಹಿಂದೆ ನಡೆದಿತ್ತು. ವಿವಾಹವಾದ ಕೆಲ ವರ್ಷಗಳ ಬಳಿಕ ಹಕೀಂ ಸಜರಾ ಅವರಿಗೆ ಚಿತ್ರಹಿಂಸೆ ನೀಡಲು ಆರಂಭಿಸಿದ್ದು, ಈ ಹಿನ್ನಲೆಯಲ್ಲಿ ಸಜರಾ ಅವರು ಕಳೆದ ಮೂರು ವರ್ಷಗಳಿಂದ ಜೋರುಕಟ್ಟೆಯಲ್ಲಿರುವ ತನ್ನ ತವರು ಮನೆಗೆ ಬಂದು ಮಕ್ಕಳೊಂದಿಗೆ ನೆಲಸಿದ್ದರು. ಶುಕ್ರವಾರ ಮಧ್ಯಾಹ್ನ ವೇಳೆ ಚೂರಿ ಹಿಡಿದುಕೊಂಡು ಬಂದಿದ್ದ ಹಕೀಂ ಏಕಾಏಕಿಯಾಗಿ ಸಜರಾ ಅವರ ಮೇಲೆ ಹಲ್ಲೆ ನಡೆಸಿ, ತಡೆಯಲು ಬಂದ ತಂದೆ ಮಹಮ್ಮದ್ ಅವರ ಮೇಲೆಯೂ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿರುವುದಾಗಿ ಆರೋಪಿಸಲಾಗಿದೆ.
ಹಲ್ಲೆ ನಡೆಸಿ ಪರಾರಿಯಾದ ಹಕೀಂನನ್ನು ಮನೆಮಂದಿ ಹಾಗೂ ಹೆತ್ತವರು ಸೇರಿಕೊಂಡು ಬೆನ್ನಟ್ಟಿ ಪಿಲಿಗೂಡು ಎಂಬಲ್ಲಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಉಪ್ಪಿನಂಗಡಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡೂ ಕೈ, ಹೊಟ್ಟೆ ಮತ್ತು ಬೆನ್ನಿನ ಭಾಗಕ್ಕೆ ಗಾಯಗಳಾಗಿರುವ ಸಜರಾ ಅವರನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.