ಮಂಗಳೂರು ಮಲ್ಲಿಗೆ, ಪರಶುರಾಮನ ಸ್ಮರಣಿಕೆಯೊಂದಿಗೆ ಸ್ವಾಗತ
ಬಂಗ್ರಕೂಳೂರಿನಲ್ಲಿ ಕಾಯ್ದಿರಿಸಲಾದ ಬೃಹತ್ ಸಮಾವೇಶದಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಂದ್ರ ಬಂದರು ಇಲಾಖೆ ಸಚಿವ ಸರ್ಬಾನಂದ್ ಸೊನೊವಾಲ್ ಅವರು ಮೈಸೂರು ಪೇಟ ಹಾಗೂ ರತ್ನ ಮಾಲೆ ಮತ್ತು ಉಡುಪಿ ಶ್ರೀಕೃಷ್ಣನ ಸ್ಮರಣಿಕೆ ನೀಡಿ ಸ್ವಾಗತಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರು ಮಲ್ಲಿಗೆ ಮಾಲಾರ್ಪಣೆ ಮಾಡಿದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಅವರು ಪರಶುರಾಮನ ಸ್ಮರಣಿಕೆಯನ್ನು ನೀಡಿ ಮೋದಿಯವರನ್ನು ಗೌರವಪೂರ್ವಕವಾಗಿ ಸಮಾರಂಭಕ್ಕೆ ಸ್ವಾಗತಿಸಿದರು.
ಈ ಸಂದರ್ಭ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಕರಾವಳಿಯ ಎಲ್ಲಾ ಶಾಸಕರು ಭಾಗವಹಿಸಿದ್ದರು.ಸಚಿವ ಸರ್ಬಾನಂದ್ ಸೊನೊವಾಲ್ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಪ್ರಧಾನಿಯವರು ಲೋಕಾರ್ಪಣೆ ಮಾಡಿದ 3,800 ಕೋಟಿ ಮೊತ್ತದ ಯೋಜನೆಗಳ ವಿವರ ನೀಡಿ ಸ್ವಾಗತಿಸಿದರು.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಕರಾವಳಿಯ ಜನತೆ ಸುವರ್ಣ ಅಕ್ಷರದಲ್ಲಿ ಬರೆದಿಡಬೇಕಾದ ದಿನ ಎಂದು ಹೇಳಿದರು.