ಮೊಯ್ದೀನ್ ಬಾವಾ ದೇವಸ್ಥಾನದ ಪ್ರಸಾದ ಕಾಲಡಿ ಹಾಕಿ ತುಳಿಯುತ್ತಾರೆ : ಶಾಸಕ ಡಾ. ವೈ ಭರತ್ ಶೆಟ್ಟಿ ಹೇಳಿಕೆಗೆ ಬಾವಾ ಕಿಡಿ

`ಮೊಯ್ದೀನ್ ಬಾವಾ ದೇವಸ್ಥಾನದ ಪ್ರಸಾದವನ್ನು ಕಾಲಡಿ ಹಾಕಿ ತುಳಿಯುತ್ತಾರೆ’ ಎಂದು ಶಾಸಕ ಡಾ| ಭರತ್ ಶೆಟ್ಟಿ ಅವರು ಹೇಳಿದ್ದಾರೆ. ಇದು ಸತ್ಯವೇ ಆಗಿದ್ದರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ ಅಥವಾ ದರ್ಗಾದಲ್ಲಿ ಆಣೆ ಮಾಡಲಿ, ನಾನು ಬರುತ್ತೇನೆ ಎಂದು ಮಾಜಿ ಶಾಸಕ ಮೊಯ್ದೀನ್ ಬಾವಾ ಅವರು ಶಾಸಕ ಭರತ್ ಶೆಟ್ಟಿಯವರಿಗೆ ಆಹ್ವಾನ ನೀಡಿದ್ದಾರೆ.

ಮಂಗಳವಾರ ನಗರ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ ಬಾಲ್ಯದಲ್ಲಿ ಹೆತ್ತವರು ಸಂಸ್ಕಾರ ಕಲಿಸಿದ್ದಾರೆ. ಇತರ ಧರ್ಮದ ಬಗ್ಗೆ ಗೌರವ ಕೊಡಲು ಕಲಿಸಿಕೊಟ್ಟಿದ್ದಾರೆ. ಎಲ್ಲಿ ಯಾವಾಗ ಪ್ರಸಾದವನ್ನು ತುಳಿದಿದ್ದೇನೆ ಎಂದು ಹೇಳಬೇಕು ಎಂದರು.

ಗಣೇಶಪುರ ದೇಗುಲಕ್ಕೆ ಬಜೆಟ್ ನಲ್ಲಿ ಬಂದ 58 ಕೋಟಿ ರೂ.ನಲ್ಲಿ ಕಮಿಷನ್ ಪಡೆಯುವ ಉದ್ದೇಶದಿಂದ 40 ಕೋಟಿಯನ್ನು ವಾರ್ಡ್ ಗಳಿಗೆ ಹಂಚಿದ್ದಾರೆ. ಇದರ ಗುತ್ತಿಗೆಗಳನ್ನು ಮುಸ್ಲಿಂ ಗುತ್ತಿಗೆದಾರರಿಗೆ ಕೊಟ್ಟು ಕಮಿಷನ್ ಪಡೆದಿರುವುದಕ್ಕೆ ಸಾಕ್ಷಿ ಇದೆ. ಬಹಿರಂಗವಾಗಿ ಚರ್ಚೆಗೆ ಬಂದರೆ ಯಾರಿಂದ ಕಮಿಷನ್ ಪಡೆದಿದ್ದೀರಿ ಎನ್ನುವುದನ್ನು ಬಹಿರಂಗ ಪಡಿಸುತ್ತೇನೆ ಎಂದು ಸವಾಲು ಹಾಕಿದರು.

ಮೊಯ್ದೀನ್ ಬಾವಾ ನೀಡುವ ಚೆಕ್ ಬೌನ್ಸ್ ಆಗುತ್ತದೆ ಎಂದೂ ಶಾಸಕರು ಹೇಳಿದ್ದು, ಯಾರಿಗೆ ನೀಡಿದ ಚೆಕ್ ಬೌನ್ಸ್ ಆಗಿದೆ ಎಂದು ಸಾಕ್ಷಿ ಸಮೇತ ತಿಳಿಸಿದರೆ 24 ಗಂಟೆಯೊಳಗೆ ಸಾರ್ವಜನಿಕ ಜೀವನದಿಂದ ನಿವೃತ್ತಿ ಆಗುತ್ತೇನೆ ಎಂದರು. ಈ ಸಂದರ್ಭದಲ್ಲಿ ಸುದ್ದಿಗೋಷ್ಟಿಯಲ್ಲಿ ಉಮೇಶ್ ದಂಡಕೇರಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.