ಮೂಡುಬಿದಿರೆ: ಶೇಂದಿ ತೆಗೆಯುತ್ತಿದ್ದಾಗ ಮರದಿಂದ ಬಿದ್ದು ಸಾವು

ಮೂಡುಬಿದಿರೆ: ಶೇಂದಿ ತೆಗೆಯುತ್ತಿದ್ದಾಗ ತಾಳೆ ಮರದಿಂದ ಬಿದ್ದು ಮೂರ್ತೆದಾರ ಮೃತಪಟ್ಟ ಘಟನೆ ಪಾಲಡ್ಕ ಗ್ರಾ.ಪಂ.ವ್ಯಾಪ್ತಿಯ ವರ್ಣಬೆಟ್ಟುವಿನಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ನಡೆದಿದೆ.
ವರ್ಣಬೆಟ್ಟು ಪಂಜಿಗುರಿಯ ನಿವಾಸಿ ಸುರೇಶ್ ಪೂಜಾರಿ(42ವ) ಸಾವನ್ನಪ್ಪಿದ ವ್ಯಕ್ತಿ. ಇವರು ಮಧ್ಯಾಹ್ನದ ವೇಳೆಗೆ ಶೇಂದಿ ತೆಗೆಯಲೆಂದು ಮನೆಯ ಹಿಂಭಾಗದಲ್ಲಿದ್ದ ತಾಳೆ ಮರಕ್ಕೆ ಹೋಗಿದ್ದರು. ಆದರೆ ಎಷ್ಟು ಹೊತ್ತಾದರೂ ಮನೆಗೆ ಮರಳಿ ಬಾರದಿರುವುದರಿಂದ ಮನೆಯವರು ಹುಡುಕಿಕೊಂಡು ಹೋದಾಗ ಮರದ ಕೆಳಗೆ ಬಿದ್ದು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ.
ಸುರೇಶ್ ಅವರಿಗೆ ಪತ್ನಿ ಮತ್ತು ಇಬ್ಬರು ಸಣ್ಣ ಪ್ರಾಯದ ಮಕ್ಕಳಿದ್ದಾರೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
