ಮೂಡುಬಿದರೆಯ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಗುದ್ದಲಿಪೂಜೆ : ಶಾಸಕ ಉಮಾನಾಥ ಕೋಟ್ಯಾನ್‍ರಿಂದ ಶಿಲಾನ್ಯಾಸ

ಮೂಡುಬಿದಿರೆ: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ 4 ರ ರೂ 10 ಕೋಟಿ ಮೊತ್ತದ ಯೋಜನೆಯಲ್ಲಿ 4.46 ಕೋಟಿ ಮೊತ್ತದ 6 ರಸ್ತೆ ಮತ್ತು ಚರಂಡಿ ಕಾಮಗಾರಿಗಳು ಹಾಗೂ ಪುರಸಭಾ ನಿಧಿ 2022-23ರಲ್ಲಿ ರೂ 1.36 ಕೋಟಿ ಮೊತ್ತದ 27 ಕಾಮಗಾರಿಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ಮಂಗಳವಾರ ಒಂಟಿಕಟ್ಟೆಯಲ್ಲಿ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಕೋಟ್ಯಾನ್ ಅವರು ಪುರಸಭಾ ವ್ಯಾಪ್ತಿಗೆ ಬಹುದೊಡ್ಡ ಮೊತ್ತದ ಅನುದಾನದೊಂದಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆಯನ್ನು ನೀಡಲಾಗಿದೆ. ನಾಲ್ಕೂವರೆ ವರ್ಷಗಳಲ್ಲಿ ಕ್ಷೇತ್ರದಲ್ಲಿ 1,800 ಕೋಟಿಯ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು ಈ ಬಗ್ಗೆ ಸಂತೃಪ್ತಿಯಿದೆ. ಇದೀಗ ಸಂಪಿಗೆಯಿಂದ ರಸ್ತೆ ಅಗಲೀಕರಣಗೊಳಿಸಿ ಪುತ್ತಿಗೆ ದೇವಸ್ಥಾನದ ಎದುರುಗಡೆಯಿರುವ ಸೇತುವೆಯನ್ನು ನೇರವಾಗಿ ಬಿಂಬಿಸಿ ಒಂಟಿಕಟ್ಟೆವರೆಗೆ ರಸ್ತೆ ಅಗಲೀಕರಣಗೊಳಿಸಲು ರೂ 5 ಕೋಟಿ ಅನುದಾನವನ್ನು ಮೀಸಲಿರಿಸಲಾಗಿದೆ. ಡೀಮ್ಡ್ ಫಾರೆಸ್ಟ್ ನಲ್ಲಿ ಮನೆ ಕಟ್ಟಿ ಕುಳಿತುಕೊಂಡವರಿಗೆ 15 ದಿನಗಳೊಳಗೆ ಹಕ್ಕುಪತ್ರವನ್ನು ನೀಡವಂತಹ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದರು.

ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಜನರ ತೆರಿಗೆಯ ಹಣವನ್ನು ಬಳಸಿ ತಾವು ಪುರಸಭಾ ವ್ಯಾಪ್ತಿಯಲ್ಲಿ ಸಣ್ಣ ಪುಟ್ಟ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಾ ಬಂದಿದ್ದೇವೆ. ಸರಕಾರದಿಂದ ದೊಡ್ಡ ಮೊತ್ತದ ಅನುದಾನ ಬಂದಿಲ್ಲವೆಂಬ ಕೊರಗು ಇತ್ತು. ಇದೀಗ ಆ ಕೊರಗನ್ನು ಶಾಸಕರು ನೀಗಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಕೆಎಂಎಫ್ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಪುರಸಭಾ ಉಪಾಧ್ಯಕ್ಷೆ ಸುಜಾತ ಶಶಿಕಿರಣ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ,ಪುರಸಭಾ ಸದಸ್ಯೆ ಸೌಮ್ಯ ಶೆಟ್ಟಿ, ರಾಜೇಶ್ ನಾಯ್ಕ್ ನವೀನ್ ಶೆಟ್ಟಿ,ಮೂಡಾ ಅಧ್ಯಕ್ಷ ಮೇಘನಾಥ ಶೆಟ್ಟಿ, ನಗರ ಅಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಬಿ.ಅಭಿಷೇಕ್, ಕಾರ್ಯಪಾಲಕ ಇಂಜಿನಿಯರ್ ಪುರಂದರ ಕೋಟ್ಯಾನ್, ಸಹಾಯಕ ಇಂಜಿನಿಯರ್ ತೇಜೋಮೂರ್ತಿ, ಮುಖ್ಯಾಧಿಕಾರಿ ಇಂದು ಎಂ ಮತ್ತಿತರರು ಈ ಸಂದರ್ಭದಲ್ಲಿದ್ದರು. ಪುರಸಭಾ ಇಂಜಿನಿಯರ್ ಪದ್ಮನಾಭ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.
