ಮೂಡುಬಿದಿರೆ: ಸಮಾಜ ಸೇವಕ, ಹೊಸಂಗಡಿ ಗ್ರಾಂ.ಪಂ.ಮಾಜಿ ಅಧ್ಯಕ್ಷ ಹರಿಪ್ರಸಾದ್ ನಿಧನ

ಮೂಡುಬಿದಿರೆ: ಸಮಾಜ ಸೇವಕ, ಹೊಸಂಗಡಿ ಗ್ರಾ.ಪಂ.ನ ಮಾಜಿ ಅಧ್ಯಕ್ಷ, ಪ್ರಸ್ತುತ ಸದಸ್ಯರಾಗಿರುವ ಹರಿಪ್ರಸಾದ್ ಅವರು ಹೃದಯಾಘಾತದಿಂದ ಭಾನುವಾರ ನಿಧನ ಹೊಂದಿದರು.
ಹೊಸಂಗಡಿ ನಿವಾಸಿಯಾಗಿರುವ ಅವರು ಹರಿಯಣ್ಣ ಎಂದೇ ಚಿರಪರಿಚಿತರಾಗಿದ್ದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಧರಣೇಂದ್ರ ಕುಮಾರ್ ಅವರ ಸಹೋದರ. ಪೆರಾಡಿ ಸೊಸೈಟಿ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವುದು ಮಾತ್ರವಲ್ಲದೆ ಹಲವಾರು ಸಮಾಜಮುಖಿ ಸಂಘ ಸಂಸ್ಥೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಹೊಸಂಗಡಿಯಲ್ಲಿ ಇಂದು ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಸದಸ್ಯರಾಗಿದ್ದ ದಿ.ರತ್ನಾಕರ್ ಅವರ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಕೂಟ ನಡೆದಿದ್ದು ಆ ಪಂದ್ಯದ ಕೂಟದಲ್ಲಿ ಭಾಗವಹಿಸಿದ್ದರೆನ್ನಲಾಗಿದೆ. ಬಳಿಕ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು ಅವರನ್ನು ಮೂಡುಬಿದಿರೆ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಹೃದಯಾಘಾತದಿಂದ ನಿಧನರಾದರೆಂದು ತಿಳಿದು ಬಂದಿದೆ.
