ಮೂಡುಬಿದಿರೆ ತಾಲೂಕು ವತಿಯಿಂದ ಧನಲಕ್ಷ್ಮೀ ಪೂಜೆ

ಆಟೋ ರಿಕ್ಷಾ ಚಾಲಕ ಮಾಲಿಕರ ಸಂಘ(ರಿ) ಮೂಡುಬಿದಿರೆ ತಾಲೂಕು ಇದರ ವತಿಯಿಂದ ಶ್ರೀ ಧನಲಕ್ಷ್ಮೀ ಪೂಜೆ ಮತ್ತು ವಾಹನ ಪೂಜೆಯು ಆಲಂಗಾರು ಶ್ರೀ ಬಡಗು ಮಹಾಲೀಂಗೇಶ್ವರ ದೇವಸ್ಥಾನದ ಅರ್ಚಕ ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಬುಧವಾರ ಸಂಜೆ ಸಮಾಜ ಮಂದಿರದ ರಿಕ್ಷಾ ಪಾರ್ಕ್ ಬಳಿ ನಡೆಯಿತು.

ಸಭಾ ಕಾರ್ಯಕ್ರಮ ಶಾಸಕ ಉಮಾನಾಥ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ರಿಕ್ಷಾ ಚಾಲಕರು ಆಪತ್ಬಾಂಧವರು. ಜನರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸುರಕ್ಷಿತವಾಗಿ ತಲುಪಿಸುವ ಮೂಲಕ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾ ಬರುತ್ತಿದ್ದಾರೆ. ಅದರಲ್ಲೂ ಮೂಡುಬಿದಿರೆಯ ಆಟೋ ಚಾಲಕರು ತುಂಬಾ ಪ್ರಾಮಾಣಿಕರು ಎಂಬ ಪ್ರಶಂಸೆಗೆ ಪಾತ್ರರಾದವರು ಎಂದು ಶ್ಲಾಘಿಸಿದರು.ನಂತರ ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಗೌರವಾಧ್ಯಕ್ಷ, ವಕೀಲ ಶರತ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಶುಭ ಹಾರೈಸಿದರು.

ಪುತ್ತಿಗೆ ದೇವಸ್ಥಾನದ ಪ್ರಧಾನ ಅರ್ಚಕ ಅಡಿಗಳ್ ಶ್ರೀನಿವಾಸ ಭಟ್, ಕೊರೋನಾ ಸಂದರ್ಭದಲ್ಲಿ ಉತ್ತಮ ಸೇವೆ ಸೇವೆ ನೀಡಿರುವ ಡಾ. ಪದ್ಮನಾಭ ಉಡುಪ, ಸಿ.ಹೆಚ್ ಮೆಡಿಕಲ್ ನ ಸಿ.ಹೆಚ್. ಗಫೂರ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಆಟೋ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಧಿರೇಂದ್ರ ಜೈನ್ ಕರಿಂಜೆ, ರಾಜೇಶ್ ಸುವರ್ಣ ಮತ್ತು ಸಂತೋಷ್ ರಾವ್ ಬೊಕ್ಕಸ ಸನ್ಮಾನ ಪತ್ರ ವಾಚಿಸಿದರು. ರೋಹನ್ ಅತಿಕಾರ ಬೆಟ್ಟು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ಶ್ರೀ ಗಜಾನನ ಭಜನಾ ಮಂಡಳಿ ಒಂಟಿಕಟ್ಟೆ ಇವರಿಂದ ಕುಣಿತ ಭಜನೆ ನಡೆಯಿತು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ ಎಂ., ಜೆಡಿಎಸ್ ನ ದಿವಾಕರ ಎಸ್.ತೋಡಾರು, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಪುರಸಭಾ ಸದಸ್ಯರಾದ ರಾಜೇಶ್ ನಾಯ್ಕ್, ಸುರೇಶ್ ಕೋಟ್ಯಾನ್ , ಕೊರಗಪ್ಪ, ಪುರಂದರ ದೇವಾಡಿಗ, ನವೀನ್ ಶೆಟ್ಟಿ, ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರಜ್ ಜೈನ್ ಮಾರ್ನಾಡ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
