“ಪರಿವರ್ತನೆಗಾಗಿ ಹಣತೆ ಹಚ್ಚೋಣ ಬನ್ನಿ – ದೀಪಾವಳಿ ಸಂಭ್ರಮ”

ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ), ಮಂಗಳೂರು ಮತ್ತು ಜಿಲ್ಲಾ ಕೇಂದ್ರ ಕಾರಾಗೃಹ, ಮಂಗಳೂರು, ಕರ್ನಾಟಕ ಸರ್ಕಾರ ಇದರ ಜಂಟಿ ಆಶ್ರಯದಲ್ಲಿ ಮಂಗಳೂರು ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಕಲೇವಾದ ಹಿರಿಯ ಸದಸ್ಯೆ, ಸಮಾಜಪರ ಚಿಂತಕಿ ಶ್ರೀಮತಿ ಬಿ.ಎಂ. ರೋಹಿಣಿಯವರ ತಾಯಿಯ ಸ್ಮರಣಾರ್ಥ, ದೇವಕಿಯಮ್ಮ ದತ್ತಿನಿಧಿ ಕಾರ್ಯಕ್ರಮ “ಪರಿವರ್ತನೆಗಾಗಿ ಹಣತೆ ಹಚ್ಚೋಣ ಬನ್ನಿ – ದೀಪಾವಳಿ ಸಂಭ್ರಮ” ನಡೆಯಿತು.

ಕಲೇವಾದ ಸದಸ್ಯೆಯರು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನೀಡಿ, ಸಿಹಿ ಹಂಚಿ ಬಂದೀಖಾನೆಯ ನಿವಾಸಿಗಳೊಂದಿಗೆ ದೀಪಾವಳಿಯ ಸಂಭ್ರಮವನ್ನು ಅಚರಿಸಿಕೊಂಡರು. ಕಾರ್ಯಕ್ರಮದಲ್ಲಿ ಕ.ಲೇ.ವಾ. ದ ಸದಸ್ಯೆಯರು ಭಾವಗಾನ, ಮಾತಿನ ಮಂಟಪ, ಏಕಪಾತ್ರಾಭಿನಯ , ಲಲಿತ ಪ್ರಬಂಧ, ಬೀಚಿ ಬುಲೆಟ್ಸ್ , ನಾಟಕ ವಾಚನ ಮುಂತಾದ ಪ್ರದರ್ಶನಗಳನ್ನು ನೀಡಿ ಎಲ್ಲರ ಮನರಂಜಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಬಿ.ಟಿ. ಓಬಳೇಶ್ವರಪ್ಪ, ಅಧೀಕ್ಷಕರು, ಜಿಲ್ಲಾ ಕೇಂದ್ರ ಕಾರಾಗೃಹ, ಮಂಗಳೂರು ಇವರು ಮಾತನಾಡಿ ನಾಲ್ಕು ಗೋಡೆಗಳ ಮಧ್ಯೆಯೇ ಇದ್ದುಕೊಂಡು ಜಡವಾಗಿರುವ, ಒತ್ತಡಗಳಿಂದ ತುಂಬಿರುವ ಮನಸ್ಸುಗಳನ್ನು ಒಂದಷ್ಟು ಅರಳಿಸುವ, ರಂಜಿಸುವ, ಆ ಮುಖಾಂತರ ಉತ್ತಮ ಆಲೋಚನೆಗಳನ್ನು ತುಂಬುವುದು ಇಂದಿನ ಕಾರ್ಯಕ್ರಮದ ಉದ್ದೇಶವಾಗಿತ್ತು.

ನಮ್ಮ ಕೋರಿಕೆಯನ್ನು ಮನ್ನಿಸಿ ಹಬ್ಬದ ದಿನವಾದ ಇಂದು ಕಲೇವಾದ ಸಹೋದರಿಯರು ಇಲ್ಲಿಗೆ ಬಂದು ನಮ್ಮೊಂದಿಗೆ ಕಳೆದಿದ್ದಾರೆ. ತಮ್ಮ ವಿವಿಧ ವಿಚಾರಪೂರ್ಣ ವಿನೋದಾವಳಿಗಳ ಮೂಲಕ ನಮ್ಮನ್ನು ರಂಜಿಸಿದ್ದಾರೆ ಎಂದು ಕೃತಜ್ಞತಾ ನುಡಿಗಳನ್ನಾಡಿದರು.‌ಅಲ್ಲದೆ ಇಂದಿನಿಂದಲಾದರೂ ಹೆಣ್ಣುಮಕ್ಕಳನ್ನು ನಾವು ನೋಡುವ ದೃಷ್ಟಿ ಬದಲಾಗಲಿ. ಅವರಲ್ಲಿ ಮಾತೃತ್ವವನ್ನು ಕಾಣುವ, ಅಕ್ಕ ತಂಗಿಯರಂತೆ ನೋಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವಂತಾಗಲಿ ಎಂಬ ಕರೆ ನೀಡಿದರು. ಕಲೇವಾದ ಅಧ್ಯಕ್ಕೆ ಶ್ರೀಮತಿ ಡಾ|| ಜ್ಯೋತೀ ಚೇಳ್ಯಾರು ಇವರು ಎಲ್ಲರನ್ನೂ ಸ್ವಾಗತಿಸಿ ಸಂಘದ ಉದ್ದೇಶ, ಬೆಳೆದು ಬಂದ ಹಾದಿ ಹಾಗೂ ಮುಂದಿನ ಯೋಜನೆಗಳ ಕುರಿತು ಪ್ರಸ್ತಾವಿಕ ನುಡಿಗಳನ್ನಾಡಿದರು. ದತ್ತಿ ನಿಧಿಯ ಪರಿಚಯವನ್ನು ನೀಡಿದರು. ಹಿರಿಯ ಲೇಖಕಿ, ಸಂಶೋಧಕಿ ಶ್ರೀಮತಿ ಬಿ.ಎಂ. ರೋಹಿಣಿಯವರು ಹಣತೆಯ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಕ.ಲೇ.ವಾ.ದ ಉಪಾಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಬಿ. ಶೆಟ್ಟಿ ಹಾಗೂ ಕಾರಾಗೃಹದ  ಸಹಾಯಕ ಅಧೀಕ್ಷಕರು ಶ್ರೀ ರಾಜೇಂದ್ರ ಕುಪಾರ್ದೆ ಇವರುಗಳು ಉದ್ಘಾಟನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಕೃತಿ ಐ ಎಸ್ ಭಟ್ ಆಶಯ ಗೀತೆ ಹಾಡಿದರು. ಶ್ರೀಮತಿ ದೇವಿಕಾ ನಾಗೇಶ್ ನಿರೂಪಿಸಿದರು.

Related Posts

Leave a Reply

Your email address will not be published.