ಮೂಡುಬಿದರೆಯಲ್ಲಿ ಮೆಸ್ಕಾಂ ಜನ ಸ್ಪಂದನಾ ಸಭೆ, ಮೆಸ್ಕಾಂನಿಂದ ಪುತ್ತಿಗೆ ಪಂಚಾಯತ್‍ಗೆ ಮೋಸ
ಮೂಡುಬಿದಿರೆ: ಪಂಚಾಯತ್ ಗೆ ನೀಡಿರುವ ವಿದ್ಯುತ್ ಬಿಲ್ಲ್ ಗಳಲ್ಲಿ ಆಗಿರುವ ಲೋಪ ದೋಷಗಳ ಬಗ್ಗೆ ಪಂಚಾಯತ್ ಪಿಡಿಒ ಸಹಿತ ಸದಸ್ಯರು ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಪುತ್ತಿಗೆಯಲ್ಲಿ ಶನಿವಾರ ನಡೆದಿದೆ. ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಪ್ರವೀಣ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆದ ಮೆಸ್ಕಾಂ ಜನ ಸ್ಪಂದನಾ ಕಾರ್ಯಕ್ರಮದಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಕಂಚಿಬೈಲು ಬೋರ್ ವೆಲ್ ಗೆ ಸಂಬಂಧಿಸಿದಂತೆ ಮಾಸಿಕ ಸರಾಸರಿ 600ರಿಂದ 700 ಇದ್ದು ಸೆಪ್ಟೆಂಬರ್ ತಿಂಗಳ ಮಾಹೆ ಯುನಿಟನ್ನು 14,689 ಎಂದು ಕೊಟ್ಟಿದ್ದಾರೆ. ನಾವು ಎಲ್ ಟಿರೇಟ್ ಚೆಕ್ ಮಾಡುವಾಗ ಸೆಪ್ಟೆಂಬರ್ ತಿಂಗಳ ವಿದ್ಯುತ್ ಯುನಿಟ್ 3,600 ಎಂದು ಹೆಚ್ಚು ವರಿ ನೀಡಿದ್ದು ಇದರ ವ್ಯತ್ಯಾಸವನ್ನು ಸರಿಪಡಿಸುವಂತೆ ಹೇಳಿದರೂ ಬದಲಾವಣೆ ಮಾಡಿಲ್ಲವೆಂದು ಮೆಸ್ಕಾಂ ಅಧಿಕಾರಿಗಳ ದುನರ್ಡತೆಯ ಬಗ್ಗೆ ಪಿಡಿಒ ಭೀಮಾನಾಯ್ಕ್ ಸಭೆಯ ಗಮನಕ್ಕೆ ತಂದರು.
ಪುತ್ತಿಗೆ ಪದವು ಎಸ್ ಸಿ ಕಾಲನಿಗೆ ನೀಡಿರುವ ವಿದ್ಯುತ್ ಲೈನ್ ಬದಲಾವಣೆ ಮಾಡದಿರುವ ಬಗ್ಗೆ ಮಾಜಿ ಸದಸ್ಯ ವಾಸುದೇವ ನಾಯಕ್ ಅಧಿಕಾರಿಗಳನ್ನು ಎಚ್ಚರಿಸಿದರು. ಮಜ್ಜಿಗುರಿ-ಆನಡ್ಕಕ್ಕೆ ಹೊಸದಾಗಿ ಕೊರೆದಿರುವ ಕೊಳವೆ ಬಾವಿಗೆ ಹಾಲಿ ಇರುವ ವಿದ್ಯುತ್ ಸ್ಥಾವರಗಳನ್ನು ಸ್ಥಳಾಂತರಿಸಲು ಸೆಪ್ಟೆಂಬರ್ ತಿಂಗಳಿನಲ್ಲಿ ಪಂಚಾಯತ್ ನಿಂದ ಪತ್ರ ವ್ಯವಹಾರ ಮಾಡಿದರೂ ಸ್ಪಂದನೆ ನೀಡದಿರುವುದರಿಂದ ಮೆಸ್ಕಾಂ ಅಧಿಕಾರಿಯ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ ಎಂದು ಸದಸ್ಯ ದಿನೇಶ್ ಕುಮಾರ್ ತರಾಟೆಗೆ ತೆಗೆದುಕೊಂಡರು. ಎನಿಕ್ರಿಪಲ್ಲ-ಹೆಗ್ಡೆ ಬೆಟ್ಟುವಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ವಿದ್ಯುತ್ ಲೈನ್ ಗಳನ್ನು ಬದಲಾವಣೆಗೊಳಿಸದಿರುವ ಬಗ್ಗೆ ಸದಸ್ಯ ಪುರುಷೋತ್ತಮ ನಾಯಕ್ ಅಧಿಕಾರಿಗಳ ಗಮನಕ್ಕೆ ತಂದರು. ಮೆಸ್ಕಾಂ ಅದಾಲತ್ ಬಗ್ಗೆ ಜನರಿಗೆ ಸರಿಯಾಗಿ ಮಾಹಿತಿ ನೀಡದಿರುವ ಬಗ್ಗೆ ಹಾಗೂ ಪಂಚಾಯತ್ ಗೆ ನೀಡಿರುವ ವಿದ್ಯುತ್ ಬಿಲ್ಲ್ ಗಳಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ಮಾಜಿ ಸದಸ್ಯ ನಾಗವರ್ಮ ಜೈನ್ ಆಕ್ರೋಶ ವ್ಯಕ್ತಪಡಿಸಿದರು. ಶಾಲಾ ಮಕ್ಕಳಿಗೆ ಪರೀಕ್ಷೆಗಳು ಆರಂಭವಾಗುತ್ತಿದೆ ಆದ್ದರಿಂದ ರಾತ್ರಿ ವೇಳೆ ವಿದ್ಯುತ್ ಕಡಿತಗೊಳಿಸಬಾರದೆಂದು ಸದಸ್ಯ ಮುರಳಿ ಸಲಹೆ ನೀಡಿದರು.
ಮಳೆಗಾಲದಲ್ಲಿ ಪುತ್ತಿಗೆ- ಪೆಲತಡ್ಕ-ಕಂಚಿಬೈಲು ಪ್ರದೇಶದ ತೋಡು ಹೊಲಗಳಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿದ್ದು ಅಲ್ಲಿನ ಮದಿಮಾಳ್ ಗುಂಡಿ ಬಳಿಯ ಬಾಲಕೃಷ್ಣ ಅವರ ಮನೆಯ ಸಮೀಪದಲ್ಲಿ ವಿದ್ಯುತ್ ತಂತಿಗಳು ನೀರಿಗೆ ಮುಳುಗುತ್ತಿವೆ ಆದ್ದರಿಂದ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬೇಕಾಗಿದೆ ಈ ಬಗ್ಗೆ ಹಲವು ಬಾರಿ ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗದಿರುವ ಬಗ್ಗೆ ಸದಸ್ಯೆ ಸಾರಿಕಾ ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೋಹನ್ ಕೆ. ಮಾತನಾಡಿ ಇಲಾಖೆಯಿಂದ ಪತ್ರ ವ್ಯವಹಾರವನ್ನು ಮಾಡಲಾಗಿದೆ ಮತ್ತು ಸರಿಯಾದ ರೀತಿಯಲ್ಲಿ ಬಿಲ್ಲ್ ನೀಡಲಾಗಿದೆ ಎಂದು ಹಾರಿಕೆಯ ಉತ್ತರವನ್ನು ನೀಡಿದಾಗ ಸದಸ್ಯರು ಸಹಿತ ಪಿಡಿಒ ತಾವು ಸುಳ್ಳು ಮಾಹಿತಿಯನ್ನು ನೀಡುವುದು ಬೇಡ ನಮಗೆ ಸರಿಯಾದ ರೀತಿಯಲ್ಲಿ ಬಿಲ್ಲನ್ನು ನೀಡಿ ಮತ್ತು ಬಿಲ್ಲ್ ಗಳಲ್ಲಿ ಆಗಿರುವ ವ್ಯತ್ಯಾಸವನ್ನು ಸರಿ ಪಡಿಸಿ ಎಂದು ಹೇಳಿದರು. ಸರಿಯಾಗಿ ಪರಿಶೀಲನೆ ನಡೆಸಿ ಎರಡು ದಿನಗಳಲ್ಲಿ ಮಾಹಿತಿ ನೀಡುವುದಾಗಿ ಉತ್ತರಿಸಿದ ಮೆಸ್ಕಾಂ ಅಧಿಕಾರಿ ನಂತರ ಸಭೆಯನ್ನು ಮುಕ್ತಾಯಗೊಳಿಸಿದರು. ಮೆಸ್ಕಾಂ ಇಲಾಖೆಯ ಅಕೌಂಟ್ ವಿಭಾಗದ ಪುಷ್ಪರಾಜ್ ಈ ಸಂದರ್ಭದಲ್ಲಿದ್ದರು.