HomeFresh Newsಪ್ರೇಮಾ ಕಿಶೋರ್‌ರವರಿಗೆ ಪ್ರತಿಷ್ಠಿತ ಅಂತ‌ರ್ ರಾಷ್ಟ್ರೀಯ ಆರ್ಯಭಟ-2026 ಪ್ರಶಸ್ತಿ ಪ್ರದಾನ

ಪ್ರೇಮಾ ಕಿಶೋರ್‌ರವರಿಗೆ ಪ್ರತಿಷ್ಠಿತ ಅಂತ‌ರ್ ರಾಷ್ಟ್ರೀಯ ಆರ್ಯಭಟ-2026 ಪ್ರಶಸ್ತಿ ಪ್ರದಾನ

ಪುತ್ತೂರು: ಮಹಿಳಾ ಯಕ್ಷಗಾನ ಕ್ಷೇತ್ರದಲ್ಲಿನ ಸಾಧನೆಗಾಗಿ ಶ್ರೀಸಾಯಿಕಲಾ ಯಕ್ಷ ಬಳಗ ಡಾ|ಶಿವರಾಮ ಕಾರಂತ ಬಾಲವನ ತಂಡದ ಸಂಚಾಲಕಿ ಪ್ರೇಮಾ ಕಿಶೋರ್‌ರವರಿಗೆ ಪ್ರತಿಷ್ಠಿತ ಅಂತ‌ರ್ ರಾಷ್ಟ್ರೀಯ ಆರ್ಯಭಟ-2026 ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್, ನಾಡೋಜ ಡಾ| ಮಹೇಶ್ ಜೋಶಿ, ಅಂತ‌ರ್ ರಾಷ್ಟ್ರೀಯ ವಿದ್ವಾಂಸ ಅರಳುಮಲ್ಲಿಗೆ ಪಾರ್ಥಸಾರಥಿ ಹಾಗೂ ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಹೆಚ್.ಎಲ್‌.ಎನ್ ರಾವ್‌ರವರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಣ್ಣಯ್ಯ ಹಾಗೂ ಗಿರಿಜಾ ದಂಪತಿ ಪುತ್ರಿಯಾದ ಇವರು ಪತಿ ಕಿಶೋರ್ ಕುಮಾ‌ರ್ ಟಿ.ವಿ ಮತ್ತು ಪುತ್ರ ಸಾಗರ್ ಕೆ.ಟಿ. ಮತ್ತು ಪುತ್ರಿ ವರ್ಷ ಟಿ.ಕೆ. ಅವರೊಂದಿಗೆ ಮುಕ್ರಂಪಾಡಿಯಲ್ಲಿ ವಾಸವಾಗಿದ್ದು ಪ್ರಸ್ತುತ ಪರ್ಲಡ್ಕ ಎಕ್ಸ್‌ಪರ್ಟ್ ಡ್ರೈವಿಂಗ್ ಸ್ಕೂಲ್‌ನಲ್ಲಿ ತರಬೇತುದಾರೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪ್ರೇಮಾ ಕಿಶೋರ್‌ರವರು ಹದಿಹರೆಯದಲ್ಲೇ ನಾಟಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ‘ಕಾರಂತರ’ ಮೂಕಜ್ಜಿಯ ಕನಸು ನಾಟಕದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಖ್ಯಾತ ನಿರ್ದೇಶಕ ಮೋಹನ ಸೋನಾ ಅವರ ಮಾರ್ಗದರ್ಶನದಲ್ಲಿ ಚಂದ್ರಶೇಖರ ಕಂಬಾರರ ಮಹಮ್ಮಾಯಿ ನಾಟಕದಲ್ಲೂ ಇವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮಂಗಳೂರಿನ ಸಂತೋಷ್ ಶೆಟ್ಟಿ ನಿರ್ದೇಶನದ ‘ಕನಸು ಕಣ್ಣು ತೆರೆದಾಗ’ ಸಿನೆಮಾದಲ್ಲಿ ಮಾಲತಿಯ ಪಾತ್ರ ನಿರ್ವಹಿಸಿದ್ದಾರೆ. ಇವರ ಹನಿಗವಿತೆಗಳು ಹೂವಿನ ಕವಿತೆಗಳು ಎನ್ನುವ ಶೀರ್ಷಿಕೆಯಡಿ ಸುದ್ದಿಯಲ್ಲಿ ಪ್ರಕಟಗೊಳ್ಳುತ್ತಿವೆ. ಬಣ್ಣ ತುಂಬಿದ ಬದುಕು ಕಥೆ ಇತ್ತೀಚೆಗೆ ಕಥಾ ದೀಪ್ತಿ ಸಂಕಲನದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಅವರ ಮನೆಯಲ್ಲಿ ಅನಾವರಣಗೊಂಡಿದೆ. ಶ್ರೀಧರ ಹಂದೆ ಅವರಿಂದ ಬಡಗು ತಿಟ್ಟು ಯಕ್ಷಗಾನದ ಕುಣಿತ ಮತ್ತು ಅಭಿನಯವನ್ನು ಅಭ್ಯಾಸ ಮಾಡಿರುವ ಇವರು ತೆಂಕುತಿಟ್ಟು ಯಕ್ಷಗಾನದಲ್ಲೂ ತೊಡಗಿಸಿಕೊಂಡು ಮುಂದೆ ಶ್ರೀಸಾಯಿಕಲಾ ಯಕ್ಷ ಬಳಗ ಎಂಬ ತಂಡವನ್ನು ಕಟ್ಟಿ ಗುರುಗಳಾದ ದಿವಾಣ ಶಿವಶಂಕರ ಭಟ್ ಮತ್ತು ಬಾಲಸುಬ್ರಹ್ಮಣ್ಯ ಗುತ್ತಿಗಾರುರವರ ಮಾರ್ಗದರ್ಶನದೊಂದಿಗೆ ತಂಡವನ್ನು ಮುನ್ನಡೆಸುತ್ತ ಹಲವು ಯುವ ಯಕ್ಷ ಕಲಾ ಪ್ರತಿಭೆಗಳಿಗೆ ಆಸರೆಯಾಗಿದ್ದಾರೆ. ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳ ಜೊತೆಗೆ ಪುಂಡುವೇಷ, ರಾಜವೇಷ, ಬಣ್ಣದ ವೇಷಗಳನ್ನು ಸಮರ್ಥವಾಗಿ ನಿರ್ವಹಿಸಿರುವ ಇವರು ಮಹಿಷಾಸುರನ ಪಾತ್ರವನ್ನು ೫೦ಕ್ಕೂ ಹೆಚ್ಚು ಬಾರಿ ನಿರ್ವಹಿಸಿ ದಾಖಲೆ ನಿರ್ಮಿಸಿದ ಹೆಗ್ಗಳಿಕೆ ಪಡೆದಿದ್ದಾರೆ.

ತೆಂಕುತಿಟ್ಟು ಹಾಗೂ ಬಡಗು ತಿಟ್ಟುನಲ್ಲಿ ಪಾತ್ರ ನಿರ್ವಹಿಸಿದ ಇವರು ಯಕ್ಷಗಾನ ಮಹಿಳಾ ಕಲಾವಲಯದ ಸವ್ಯಸಾಚಿ ಎಂಬ ಸಾರ್ಥಕ ಮೆಚ್ಚುಗೆಗೆ ಭಾಜನರಾಗಿರುತ್ತಾರೆ. ಇವರಿಗೆ 2016ರಲ್ಲಿ ಜೆಸಿಐ ಯಿಂದ ‘ಸಾಧನ ಶ್ರೀ’ ಗೌರವ, ೨೦೧೭ರಲ್ಲಿ ಕರ್ನಾಟಕ ಸರಕಾರದ ಶಿಶು ಅಭಿವೃದ್ಧಿ ಇಲಾಖೆಯಿಂದ ‘ಕಲಾಶ್ರೀ’ ಪುರಸ್ಕಾರ, ೨೦೨೩ ರಲ್ಲಿ ಶಿವಮೊಗ್ಗದಲ್ಲಿ ‘ಕನಕಶ್ರೀ’ ರಾಜ್ಯಮಟ್ಟದ ಸನ್ಮಾನ ಲಭಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments