‘ಕೇಂದ್ರ ಸರ್ಕಾರ ಆರೋಪಿಯನ್ನು ರಕ್ಷಣೆ ಮಾಡುತ್ತಿದೆ’ : ಕುಸ್ತಿ ಪಟುಗಳ ಪರವಾಗಿ ಉಡುಪಿಯಲ್ಲಿ ಪ್ರತಿಭಟನೆ
ಹಲವು ದಿನಗಳಿಂದ ಭಾರತೀಯ ಮಹಿಳಾ ಕುಸ್ತಿ ಪಟುಗಳು ಭಾರತ ಕುಸ್ತಿ ಫೆಡರೇಶನ್ ನ ಅಧ್ಯಕ್ಷರಾದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪಿಸಿ ತೀವ್ರ ಪ್ರತಿಭಟನೆ ನಡೆಸುತ್ತಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ವಿಚಾರವಾಗಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿಲ್ಲ, ದೇಶದ ಮಹಿಳಾ ಕುಸ್ತಿಪಟುಗಳಿಗೆ ನ್ಯಾಯಕೊಡಿ ಎಂದು ಒತ್ತಾಯಿಸಿ, ಸಮಾನ ಮನಸ್ಕ ಸಂಘಟನೆಗಳು ಉಡುಪಿಯಲ್ಲಿ ಮೇ 31 ರ ಬುಧವಾರದಂದು ಪ್ರತಿಭಟಿಸಿವೆ. ಕರ್ನಾಟಕ ದಲಿತ ಸಂಘರ್ಷ ಐಕ್ಯತಾ ಸಮಿತಿ ಮತ್ತು ಸಮಾನಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಉಡುಪಿ ನಗರದ ಬೋರ್ಡ್ ಹೈಸ್ಕೂಲ್ ಮುಂಭಾಗದಲ್ಲಿ ಪಂಜಿನ ಸಭೆ ಪ್ರತಿಭಟನೆ ನಡೆಯಿತು.
ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಹೆಚ್ಚಿಸಿದ ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲು ಮಾಡಲಾಗಿದೆ. ಕೇಂದ್ರ ಸರ್ಕಾರ ಆರೋಪಿಯನ್ನು ರಕ್ಷಣೆ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ದೌರ್ಜನ್ಯಕ್ಕೊಳಗಾದ ಮಹಿಳಾ ಕ್ರೀಡಾಪಟುಗಳಿಗೆ ನ್ಯಾಯ ಸಿಗುವವರೆಗೆ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಸಂಘಟನೆ ಹೇಳಿಕೆ ನೀಡಿದೆ. ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಪಂಜನ್ನು ಹಿಡಿದುಕೊಂಡು ನಗರದಲ್ಲಿ ಮೆರವಣಿಗೆ ನಡೆಸಿ ಕೇಂದ್ರದ ಬಿಜೆಪಿ ಸರಕಾರದ ವಿರುದ್ದ ಘೋಷಣೆಯನ್ನು ಕೂಗಿದರು.
ದೇಶಕ್ಕೆ ಹೆಮ್ಮೆ ತಂದ ಕ್ರೀಡಾಪಟುಗಳು ಲೈಂಗಿಕ ದೌರ್ಜನ್ಯ ದ ಆರೋಪವನ್ನು ಮಾಡುತ್ತಿರುವಾಗ ಆರೋಪಿಯನ್ನು ರಕ್ಷಣೆ ಮಾಡುವ ಕೆಲಸವನ್ನು ಕೇಂದ್ರದ ಸರಕಾರ ಮಾಡುತ್ತಿದೆ. ಅವರ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ವನ್ನು ಸರಕಾರ ಮಾಡುತ್ತಿದ್ದು, ಈ ಹಿಂದೆ ರೈತರ ಪ್ರತಿಭಟನೆಯ ಸಂಧರ್ಭದಲ್ಲಿ ಕೂಡಾ ಸರಕಾರ ಇದೇ ರೀತಿಯಲ್ಲಿ ವರ್ತಿಸಿತ್ತು. ಪೋಸ್ಕೋ ಪ್ರಕರಣ ಆಗಿದ್ದರೂ ಸಹ ಸರಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.