ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಡಾ| ಎಂ. ಎಸ್.ಮೂಡಿತ್ತಾಯ ಅಧಿಕಾರ ಸ್ವೀಕಾರ
ಉಳ್ಳಾಲ: ಮಂಗಳೂರಿನ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಎಂ.ಎಸ್.ಮೂಡಿತ್ತಾಯ ಇಂದು ಅಧಿಕಾರ ಸ್ವೀಕರಿಸಿದರು. ಅವರು ಈ ಹಿಂದೆ ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಪತಿಗಳಾಗಿ, ಕುಲಸಚಿವರಾಗಿ ಮತ್ತು ಗ್ಲೋಬಲ್ ಇನಿಶಿಯೇಟಿವ್ ನ ನಿರ್ದೆಶಕರಾಗಿ ಕಾರ್ಯ ನಿರ್ವಹಿಸಿದ್ದರು. ಅದಲ್ಲದೆ ಅವರು ನಿಟ್ಟೆಯಲ್ಲಿರುವ ಜಸ್ಟಿಸ್ ಕೆ. ಎಸ್. ಹೆಗ್ಡೆ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ನಿರ್ದೆಶಕರಾಗಿ, ಡಾ| ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ, ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮತ್ತು ದಾವಣಗೆರೆಯ ಉನ್ನತ ಶಿಕ್ಷಣ ಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ತಮ್ಮ ಪದವಿ ಶಿಕ್ಷಣವನ್ನು ವಾಣಿಜ್ಯ ವಿಷಯದಲ್ಲಿ ಮತ್ತು ವೆಚ್ಚ ನಿರ್ವಹಣಾ ಶಾಸ್ತ್ರ (ಕಾಸ್ಟ್ ಅಕೌಂಟಿಂಗ್) ವಿಷಯದಲ್ಲಿ ಉನ್ನತ ಶಿಕ್ಷಣವನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದಿದ್ದಾರೆ. ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದು, ಅಮೇರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಪೋಸ್ಟ್ ಡಾಕ್ಟೋರಲ್ ಸಂಶೋಧನೆಯನ್ನೂ ಪೂರ್ಣಗೊಳಿಸಿದ್ದರು.
ಡಾ|| ಮೂಡಿತ್ತಾಯ ಅವರು ತಮ್ಮ ನಾಲ್ಕು ದಶಕಗಳ ಶೈಕ್ಷಣಿಕ ವೃತ್ತಿಯಲ್ಲಿ ಹಲವಾರು ನಿಯತಕಾಲಿಕಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ ಮತ್ತು 10 ಪುಸ್ತಕಗಳನ್ನು ಪ್ರಕಟಿಸಿದ್ದು, ಭಾರತೀಯ ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆ, ಕರ್ನಾಟಕ ರಾಜ್ಯ ಕೃಷಿ ಮತ್ತು ಮಾರುಕಟ್ಟೆ ಮಂಡಳಿ, ನಬಾರ್ಡ್, ಫೋರ್ಡ್ ಫೌಂಡೇಶನ್, ಐಸಿಎಸ್‌ಎಸ್‌ಆರ್, ಸರ್ ರತನ್ ಟಾಟಾ ಟ್ರಸ್ಟ್, ಭಾರತ ಸರಕಾರದ ಹಣಕಾಸು ಸಚಿವಾಲಯ, ಅಮೇರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಗ್ಲೋಬಲ್ ಎಂಗೇಜ್‌ಮೆಂಟ್ ಫಂಡ್ ಮುಂತಾದ ಸಂಸ್ಥೆಗಳ ಧನಸಹಾಯದೊಂದಿಗೆ ಹಲವು ಸಂಶೋಧನಾ ಯೋಜನೆಗಳನ್ನು ನಿರ್ವಹಿಸಿದ್ದಾರೆ.
ಅವರು ಮ್ಯಾನೇಜ್ ಮೆಂಟ್ ವಿಷಯದಲ್ಲಿ ಸಮಕಾಲೀನ ಸಮಸ್ಯೆಗಳ ಕುರಿತಾದ ಹಣಕಾಸು ಸೇರ್ಪಡೆ, ಗುಣಮಟ್ಟ ನಿರ್ವಹಣಾ ವ್ಯವಸ್ಥೆ ಮತ್ತು ಕಾರ್ಪೊರೇಟ್ ಫಿಲಾಂಡ್ಲಪಿ ಮುಂತಾದ ವಿಷಯಗಳಲ್ಲಿ ಪಿ.ಹೆಚ್.ಡಿ ಪದವಿಗಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಡಾ| ಮೂಡಿತ್ತಾಯ ಅವರು ಹಲವಾರು ಉನ್ನತ ಶಿಕ್ಷಣ ಹಾಗೂ ಇತರ ಸಂಸ್ಥೆಗಳ ಮಂಡಳಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಆಮೇರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ, ನೆದರ್ ಲ್ಯಾಂಡ್ಸ್‌ನ ಎರಾಸ್ಮಸ್ ವಿಶ್ವವಿದ್ಯಾನಿಲಯ, ಉಗಾಂಡಾದ ಮಕರೆರೆ ವಿಶ್ವವಿದ್ಯಾನಿಲಯ, ಫಿಲಿಪೈನ್ಸ್ ರಾಷ್ಟ್ರೀಯ ವಿಶ್ವವಿದ್ಯಾನಿಲಯ ನ್ಯೂ ಇಂಗ್ಲೆಂಡ್ ವಿಶ್ವವಿದ್ಯಾನಿಲಯ ಮುಂತಾದ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಅವರು ಭಾರತ ಮತ್ತು ವಿದೇಶಗಳಲ್ಲಿ ಬೋಧನೆ, ಸಂಶೋಧನೆ ಮತ್ತು ಸಲಹಾ ವಿಷಯದಲ್ಲಿ ವ್ಯಾಪಕ ಯೋಜನೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ.