ಆಷಾಢಮಾಸದಲ್ಲಿ ಮನೆ ಮನೆಗೆ ಭೇಟಿ ನೀಡುತ್ತಿರುವ ಆಟಿಕಳಂಜ

ಜಾನಪದ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿರುವ ತುಳುನಾಡಿನಲ್ಲಿ ಅಷಾಢಮಾಸ ಬಂತೆಂದರೆ ಆಟಿಕಳಂಜ ಮನೆಮನೆ ಬಾಗಿಲಲ್ಲಿ ಪ್ರತ್ಯಕ್ಷನಾಗುತ್ತಾನೆ. ಆಟಿ ಕಳಂಜ ಮನೆ ಮನೆಗೆ ಬಂದು ಮಾರಿಯನ್ನು ನಿವಾರಿಸುತ್ತಾನೆ. ಮೂಡಣದ ಮಾರಿಯನ್ನು ಮೂಡಣದೂರಿಗೆ ಸಾಗಿಸುತ್ತಾನೆ. ಮನುಷ್ಯರಿಗಾಗಲಿ, ಪ್ರಾಣಿಗಳಿಗಾಗಲೀ ಬರುವ ಕಾಯಿಲೆಯನ್ನು ನಿವಾರಣೆ ಮಾಡುವ ಮಾಂತ್ರಿಕನಂತೆ ಕಳಂಜ ಎನ್ನುವುದು ಇಲ್ಲಿನ ಜನರ ನಂಬಿಕೆ.

ತುಳುನಾಡಿನಲ್ಲಿ ಆಷಾಡ ಮಾಸವನ್ನು ‘ಆಟಿ’ ಎಂದು ಕರೆಯುತ್ತಾರೆ. ಆಟಿ ಮಾಸದಲ್ಲಿ ವಿಪರೀತ ಮಳೆ ಬರುವುದು ಸಾಮಾನ್ಯವಾಗಿದ್ದು,ಹಿಂದೆ ತುಳುನಾಡಿನ ಜನ ಈ ತಿಂಗಳನ್ನು ಬಹಳ ಕಷ್ಟದಿಂದ ಸಾಗಿಸುತ್ತಿದ್ದರು. ಅತೀ ಮಳೆಯಿಂದಾಗಿ ಆರೋಗ್ಯ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಇಲ್ಲಿಯ ಜನರನ್ನು ಕಾಡುತ್ತಿದ್ದ ಆ ಸಮಯದಲ್ಲಿ ತುಳುನಾಡಿನಲ್ಲಿ ಅಚರಣೆಯಲ್ಲಿದ್ದ ಒಂದು ಪ್ರಕಾರವೇ ಆಟಿ ಕಳಂಜ.

ದೈವಾರಾಧನೆಯ ಸಂಸ್ಕತಿಯಲ್ಲಿ ವೀರರ ಆರಾಧನೆ ಬಹಳ ಮುಖ್ಯವಾದ ಒಂದು ಅಂಗವಾಗಿದೆ. ಯೋಧರು ಅಥವಾ ಅರಸರು ತಮ್ಮ ಮರಣದ ಬಳಿಕ ದೈವಗಳಾಗಿ ಆರಾಧನೆಗೊಂಡ ನಿದರ್ಶನಗಳು ಭೂತಾರಾಧನೆಯಲ್ಲಿ ಸಾಕಷ್ಟಿವೆ. ಆಟಿ ಕಳಂಜ ಸಂಪ್ರದಾಯದಲ್ಲಿ ಮಾನುಷ ಮತ್ತು ಅತಿಮಾನುಷ ನಡುವಿನ ರೂಪವಾದ ಮಂತ್ರವಾದಿಯ ಮತ್ತು ದಾರ್ಶನಿಕನಾಗಿ ಆಟಿ ಕಳಂಜ ಕಾಣುತ್ತಾನೆ. ತುಳುನಾಡಿನ ಆಟಿ ಶಮಾಸದಲ್ಲಿ ಮನೆಮನೆಯಲ್ಲಿ ಪ್ರತ್ಯಕ್ಷನಾಗುವ ಆಟಿಕಳಂಜ, ಮನುಷ್ಯರಿಗಾಗಲೀ , ಪ್ರಾಣಿಗಳಿಗಾಗಲೀ ಬರುವ ಮಾರಿಯನ್ನು ನಿವಾರಣೆ ಮಾಡುವನು ಹಾಗೂ ಅದಕ್ಕೆ ಪರಿಹಾರ ನೀಗುವವನು ಎನ್ನುವುದು ಇಲ್ಲಿನ ಜನರ ನಂಬಿಕೆ, ಸಾಮಾನ್ಯವಾಗಿ ನಲಿಕೆ ಜನಾಂಗದವರು ಆಟಿಕಳಂಜ ವೇಷ ಹಾಕುವುದು ವಾಡಿಕೆ. ಮನೆಗೆ ಬಂದ ಕಳಂಜನಿಗೆ ಮನೆ ಮಂದಿ ಅಕ್ಕಿ, ತೆಂಗಿನಕಾಯಿ, ಎಣ್ಣೆ ಮತ್ತು ಕಾರ , ಅರಿಸಿನ ನೀಡುವುದು ಸಂಪ್ರದಾಯ.