ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಮಿಕ ವಿರೋಧಿ ನೀತಿಗೆ ಖಂಡನೆ..!!
ಪುತ್ತೂರು : ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಮತ್ತು 2022-23ನೇ ಸಾಲಿನಲ್ಲಿ ಕಾರ್ಮಿಕರ ಮಕ್ಕಳಿಗೆ ವಿತರಿಸಬೇಕಾಗಿದ್ದ ಶೈಕ್ಷಣಿಕ ಧನಸಹಾಯವನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಜ.9ರಂದು ಬೆಂಗಳೂರಿನ ಕಾರ್ಮಿಕ ಕಲ್ಯಾಣ ಮಂಡಳಿಯ ಸುರಕ್ಷಾ ಭವನದ ಎದುರು ನಡೆಸಲುದ್ದೇಶಿಸಿರುವ ಪ್ರತಿಭಟನೆಗೆ ಅವಕಾಶ ನೀಡದ ಕಾರಣ ಮುಂದೆ ಕಾನೂನು ಹೋರಾಟಕ್ಕಿಳಿಯುತ್ತೇವೆ ಎಂದು ಕಡಬ ಮರ್ಧಾಳದ ಶ್ರಮಿಕ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಕೆ.ಸಿ.ಮೋಹನ್ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕರ ನ್ಯಾಯ ಸಮ್ಮತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲು ಅನುಮತಿ ಕೇಳಿದ್ದೆವು. ಆದರೆ ಕಾರ್ಮಿಕ ಕಲ್ಯಾಣ ಮಂಡಳಿಯವರೊಂದಿಗೆ ಅಲ್ಲಿನ ಸಿದ್ಧಾಪುರ ಪೊಲೀಸ್ ಠಾಣೆಯ ಪೊಲೀಸರು ಶಾಮೀಲಾಗಿ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದಾರೆ. ಪ್ರತಿಭಟನೆ ನಡೆಸಿದಲ್ಲಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಮತ್ತು ಇನ್ನಿತರ ನಿಯಮಗಳಡಿ ಕೇಸು ದಾಖಲಿಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಪೆÇಲೀಸ್ ಬಲ ಪ್ರಯೋಗದ ಮೂಲಕ ಪ್ರತಿಭಟನೆ ಹತ್ತಿಕ್ಕುವ ಮೂಲಕ ಕಾರ್ಮಿಕ ಸಂಘಟನೆಗಳ ಸಂವಿಧಾನಾತ್ಮಕ ಹಕ್ಕನ್ನು ಕಸಿಯಲಾಗಿದೆ.ಇದು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ ಎಂದರು. ಸಂಘದ ಅಧ್ಯಕ್ಷ ಶಿವಶಂಕರ್ ಕೆ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ, ಸದಸ್ಯರಾದ ಹರಿಶ್ಚಂದ್ರ ಕೆ.ಎನ್.ಸುಬ್ರಹ್ಮಣ್ಯ, ವಿಶ್ವನಾಥ ಗೌಡ ಕುದ್ಮಾರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.