ಶಂಕುಸ್ಥಾಪನೆಗೊಂಡು ಸ್ತಬ್ಧಗೊಂಡಿದ್ದ ಹಾರಾಡಿ ಕ್ರಾಸ್ ರೈಲು ನಿಲ್ದಾಣ ರಸ್ತೆ ಮತ್ತೆ ಆರಂಭಗೊಂಡ ಕಾಮಗಾರಿ

ಪುತ್ತೂರು: ಕಳೆದ ನವೆಂಬರ್ 2ರಂದು ಶಂಕುಸ್ಥಾಪನೆಗೊಂಡ ಬಳಿಕ ಎರಡೂವರೆ ತಿಂಗಳು ಸ್ತಬ್ದಗೊಂಡಿದ್ದ ಹಾರಾಡಿ ಕ್ರಾಸ್- ರೈಲು ನಿಲ್ದಾಣ ರಸ್ತೆಯ ಅಭಿವೃದ್ಧಿ ಕಾಮಗಾರಿ ಇದೀಗ ಚಾಲನೆ ಪಡೆದುಕೊಳ್ಳುತ್ತಿದೆ. ಶುಕ್ರವಾರ ನಗರಸಭೆ ಅಧ್ಯಕ್ಷ ಜೀವಂಧರ ಜೈನ್, ಅಧಿಕಾರಿಗಳ ತಂಡ ಸ್ಥಳ ಭೇಟಿ ನಡೆಸಿ ಪರಿಶೀಲನೆ ನಡೆಸಿತು. ಕೆಲಸ ಆರಂಭಗೊಳ್ಳುತ್ತಿದೆ ಎಂದು ನಗರಸಭಾ ಅಧ್ಯಕ್ಷ ಜೀವಂಧರ ಜೈನ್ ಹೇಳಿದರು. ನ.2ರಂದು ಶಂಕುಸ್ಥಾಪನೆಯಾದ ಬೆನ್ನಲ್ಲೇ ಕೆಲಸ ಆರಂಭಗೊಳ್ಳಬೇಕಿತ್ತು. ಡಿಸೆಂಬರ್ ಅಂತ್ಯದ ಒಳಗೆ ಕಾಮಗಾರಿ ಮುಗಿದು ಜನವರಿ ಆರಂಭದಲ್ಲೇ ರಸ್ತೆ ಬಿಟ್ಟುಕೊಡಬೇಕಿತ್ತು. ಆದರೆ ಮುಷ್ಕರದ ಪರಿಣಾಮ ಜಲ್ಲಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಕೆಲಸ ಆರಂಭಿಸಲು ಸಾಧ್ಯವಾಗಲಿಲ್ಲ. ಇದೀಗ ಸಮಸ್ಯೆ ಮುಗಿದಿದ್ದು ಕೆಲಸ ಆರಂಭಗೊಳ್ಳುತ್ತಿದೆ ಎಂದವರು ನುಡಿದರು.
ಹಾರಾಡಿ ಕ್ರಾಸ್‍ನಿಂದ ರೈಲು ನಿಲ್ದಾಣದವರೆಗೆ 730 ಮೀಟರ್ ಉದ್ದದ ರಸ್ತೆ 5.5 ಮೀಟರ್ ಅಗಲಕ್ಕೆ ಕಾಂಕ್ರಿಟೀಕರಣಗೊಳ್ಳಲಿದೆ. 14 ಮತ್ತು 15ನೇ ಹಣಕಾಸು ನಿಧಿಯಲ್ಲಿ ಉಳಿಕೆಯಾದ ಮೊತ್ತದಲ್ಲಿ 1.07 ಕೋಟಿ ರೂಪಾಯಿ ವ್ಯಯಿಸಿ ಕಾಮಗಾರಿ ನಡೆಸಲಾಗುತ್ತಿದೆ. ಇನ್ನು ಒಂದೂವರೆ ತಿಂಗಳಲ್ಲಿ ಕೆಲಸ ಮುಗಿಯುವ ಸಾಧ್ಯತೆ ಇದೆ. ಸುಂದರ ರಸ್ತೆಯಾಗಿ ಮಾರ್ಪಡಲಿದ್ದು, ಪುತ್ತೂರು ನಗರದ ಬಹುಬೇಡಿಕೆಯ ರಸ್ತೆಯಾಗಲಿದೆ. ಉಪ್ಪಿನಂಗಡಿ ಕಡೆಯಿಂದ ಬರುವವರಿಗೆ ಹಾರಾಡಿ ಕ್ರಾಸ್‍ನಿಂದ ರೈಲು ನಿಲ್ದಾಣದ ಬಳಿ ಹಾದುಕೊಂಡು ಮಡಿವಾಳಕಟ್ಟೆ ಮೂಲಕ ನಗರ ಪ್ರವೇಶಿಸಲು ಅನುಕೂಲಕರವಾಗಲಿದೆ. ಇದು ಪುತ್ತೂರಿನ ವರ್ತುಲ ರಸ್ತೆಯಾಗಿ ಅಭಿವೃದ್ಧಿಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ರಸ್ತೆ ಅಭಿವೃದ್ಧಿಗೆ ರೈಲ್ವೆ ನಿರಕ್ಷೇಪಣ ಪತ್ರ ನೀಡಿದೆ. ನಗರಸಭೆ ಪೌರಾಯುಕ್ತರಾದ ಮಧು ಎಸ್. ಮನೋಹರ್, ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್, ಪ್ರಮುಖರಾದ ರಾಮದಾಸ್ ಹಾರಾಡಿ ಮತ್ತಿತರರು ಉಪಸ್ಥಿತರಿದ್ದರು.
