HomeFresh Newsಪುತ್ತೂರು : ತುಳು ಲಿಪಿಯಲ್ಲಿ ಭಗವದ್ಗೀತೆ ಬರೆದ ಪುತ್ತೂರಿನ ಮಹಿಳೆ

ಪುತ್ತೂರು : ತುಳು ಲಿಪಿಯಲ್ಲಿ ಭಗವದ್ಗೀತೆ ಬರೆದ ಪುತ್ತೂರಿನ ಮಹಿಳೆ

ಪುತ್ತೂರು : ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎನ್ನುವ ಒತ್ತಾಯಗಳು ಊರ್ಜಿತದಲ್ಲಿರುವ ಸಮಯದಲ್ಲಿ ತುಳು ಭಾಷೆ, ಲಿಪಿಯಲ್ಲಿ ಹಲವಾರು ಕೃತಿಗಳು ಬರಲಾರಂಭಿಸಿದೆ. ನೇಪತ್ಯಕ್ಕೆ ಸರಿದಿದ್ದ ತುಳು ಲಿಪಿಯನ್ನು ಮತ್ತೆ ಪರಿಚಯಿಸುವ ಕಾರ್ಯ ಈಗಾಗಲೇ ನಡೆದಿದ್ದು, ಈ ಸಾಲಿಗೆ ಇನ್ನೊಂದು ಹೊಸ ಪ್ರಯತ್ನ ಸೇರ್ಪಡೆಗೊಂಡಿದೆ. ಭಗವದ್ಧೀತೆಯ 18 ಶ್ಲೋಕ ಮತ್ತು ಸಾರವನ್ನು ತುಳು ಲಿಪಿಯಲ್ಲಿ ಮತ್ತು ಕನ್ನಡ ಲಿಪಿಯ ಮೂಲಕ ತುಳುವಿನಲ್ಲಿ ಬರೆಯಲಾಗಿದ್ದು, ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಮಹಿಳೆಯೊಬ್ಬರು ಈ ಸಾಧನೆಯನ್ನು ಮಾಡಿದ್ದಾರೆ.

ಪುತ್ತೂರಿನ ನರಿಮೊಗರು ಸಮೀಪದ ಕೊಡಂಕೇರಿ ನಿವಾಸಿ ಭರತನಾಟ್ಯ ಪರಿಣತೆಯಾಗಿರುವ ಅಪರ್ಣಾ ಕೊಡಂಕೇರಿ ಈ ಸಾಧನೆ ಮಾಡುವ ಮೂಲಕ ತುಳು ಭಾಷೆ ಹಾಗು ಸಾಹಿತ್ಯಕ್ಕೆ ಇನ್ನೊಂದು ಗರಿಯನ್ನು ಜೋಡಿಸಿದ್ದಾರೆ. ಹಿಂದೂ ಧರ್ಮಗ್ರಂಥವಾದ ಮಹಾಭಾರತ'ದ ಭಾಗವಾದಭಗವದ್ಗೀತೆ’ಯನ್ನು ತುಳು ಲಿಪಿಯನ್ನು ಬಳಸಿ ಅನುವಾದಿಸಿದ್ದು, ಈ ಪುಸ್ತಕವನ್ನು ಶ್ರೀ ಕ್ಷೇತ್ರ ನರಸಿಂಹ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಗಳು, ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಮತ್ತು ಸುಬ್ರಹ್ಮಣ್ಯ ಮಠದ ವೇದವ್ಯಾಸ ಸಂಶೋದನಾ ಕೇಂದ್ರದ ಆನಂದತೀರ್ಥ ಸಗ್ರಿ ಅವರ ಸಮ್ಮುಖದಲ್ಲಿ ಇತ್ತೀಚೆಗೆ ಪುಸ್ತಕ ಬಿಡುಗಡೆ ಮಾಡಲಾಗಿದೆ.

ಕೋವಿಡ್ ಸಮಯದಲ್ಲಿ ಮನೆಯಲ್ಲೇ ಇದ್ದ ಸಂದರ್ಭದಲ್ಲಿ ಅಪರ್ಣಾ ಕೊಡಂಕೇರಿ ತನ್ನ ಸಹೋದರ ಮುಕುಂದ ಅವರು ಕಲಿಸಿಕೊಟ್ಟ ತುಳು ಲಿಪಿಯನ್ನು ಅಭ್ಯಾಸ ಮಾಡಿ ಬರೆಯಲು ಶುರು ಮಾಡಿದ್ದರು. ಹೀಗೆ ಬರೆಯುವ ಸಮಯದಲ್ಲಿ ಮಹಾಭಾರತದಲ್ಲಿ ಶ್ರೀ ಕೃಷ್ಣ ಭೋಧಿಸಿದ ಭಗವದ್ಗೀತೆಯನ್ನು ತುಳು ಭಾಷೆ ಮತ್ತು ಲಿಪಿಯಲ್ಲಿ ಏಕೆ ಬರೆಯಬಾರದು ಎನ್ನುವ ಮನಸ್ಸಲ್ಲಿ ಮೂಡಿತ್ತು. ತುಳು ಮಾತೃಭಾಷೆಯ ಜನಕ್ಕೆ ತುಳುವಲ್ಲಿ ಬರೆದರೆ, ಮಾತನಾಡಿದರೆ ಅದು ಹೃದಯಕ್ಕೆ ತೀರಾ ಹತ್ತಿರವಾಗಿರುತ್ತೆ ಅನ್ನೋ ಕಾರಣಕ್ಕೆ ಭಗವದ್ಗೀತೆಯ 18 ಸ್ಲೋಕದ ಸಾರ ಹಾಗು ತಾತ್ಪರ್ಯಗಳನ್ನು ತುಳು ಲಿಪಿ ಮತ್ತು ಕನ್ನಡ ಲಿಪಿಯನ್ನು ಬಳಸಿ ತುಳುವಲ್ಲಿ ಬರೆದಿದ್ದೇನೆ ಎನ್ನುತ್ತಾರೆ ಕೃತಿಯ ಲೇಖಕಿ ಅಪರ್ಣಾ.

ಪುಸ್ತಕದ ಪ್ರತೀ ಪುಟದಲ್ಲಿ ಎಡ ಭಾಗದಲ್ಲಿ ಸಂಪೂರ್ಣ ತುಳು ಲಿಪಿಯನ್ನು ಬಳಸಿ ಶ್ಲೋಕ ಮತ್ತು ಸಾರವನ್ನು ಬರೆಯಲಾಗಿದ್ದು, ಬಲ ಭಾಗದಲ್ಲಿ ಕನ್ನಡ ಲಿಪಿ ಬಳಸಿ ತುಳುವಿನಲ್ಲಿ ಶ್ಲೋಕದ ಅರ್ಧವನ್ನು ಬರೆಯಲಾಗಿದೆ. ತುಳು ಲಿಪಿಯಲ್ಲಿ ಭಗವದ್ಗೀತೆಯನ್ನು ಬರೆದಿರುವುದು ಇದೇ ಮೊದಲಾಗಿದ್ದು, ತುಳು ಭಾಷೆಯ ಬೆಳವಣಿಗೆಗೆ ಅಪರ್ಣಾ ಕೊಡಂಕೇರಿ ತನ್ನದೇ ಆದ ಕೊಡುಗೆಯನ್ನು ಈ ಸಾಧನೆಯ ಮೂಲಕ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments