ಒಡ್ಡೂರು ಫಾರ್ಮ್‍ನಲ್ಲಿ ತ್ಯಾಜ್ಯದಿಂದ ಸಿಎನ್‍ಜಿ ಉತ್ಪಾದನೆ
ಬಂಟ್ವಾಳ: ನಾವು ಎಲ್ಲೆಂದರಲ್ಲಿ ಎಸೆದ ತ್ಯಾಜ್ಯ ಕೊಳೆತು ದುರ್ವಾಸನೆ ಬೀರಿದರೆ ಪರಿಸರಕ್ಕೂ ಹಾನಿ, ಆರೋಗ್ಯಕ್ಕೂ ತೊಂದರೆ. ಒಣ ಕಸಗಳನ್ನು ಹೇಗಾದರೂ ವಿಲೇವಾರಿ ಮಾಡಬಹುದು ಆದರೆ ನಿತ್ಯ ಸಂಗ್ರಹವಾಗುವ ಹಸಿ ಕಸವನ್ನು ವಿಲೇವಾರಿ ಮಾಡುವುದೇ ಪ್ರತೀ ಆಡಳಿತ ವ್ಯವಸ್ಥೆಯ ಮುಂದಿರುವ ಸವಾಲು. ಈ ಸಮಸ್ಯೆಗೆ ಪರಿಹಾರ ಎನ್ನುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರ ಮಗ ಉನ್ನತ್ ನಾಕ್ ಕೊಳೆಯುವ ಹಸಿ ಕಸಗಳು ಹಾಗೂ ದ್ರವ ತ್ಯಾಜ್ಯವನ್ನು ಬಳಸಿ ಅನಿಲ ಉತ್ಪಾದಿಸುವ ಸಿಎನ್ಜಿ (ಕಂಪ್ರೆಸ್ಡ್ ನ್ಯಾಚ್ಯರಲ್ ಗ್ಯಾಸ್) ಘಟಕವನ್ನು ಗುರುಪುರದ ಒಡ್ಡೂರು ಫಾರ್ಮ್‍ನಲ್ಲಿ ಅನುಷ್ಠಾನಗೊಳಿಸಿದ್ದಾರೆ.
ಒಡ್ಡೂರು ಎನರ್ಜಿ ರಿನಿವೇಬಲ್ ನ್ಯಾಚುರಲ್ ಗ್ಯಾಸ್ ಪ್ಲಾಂಟ್ ಎನ್ನುವ ಹೆಸರನಲ್ಲಿ ಸಿಎನ್ಜಿ ಘಟಕ ಸ್ಥಾಪಿಸಲಾಗಿದ್ದು ರೀಟ್ಯಾಪ್ ಸೋಲ್ಯೂಷನ್ಸ್ ಎನ್ನುವ ಕಂಪನಿ ಇದರ ನಿರ್ವಹಣೆ ಹಾಗೂ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದೆ. ನಗರ ಹಾಗೂ ಪಂಚಾಯತಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಹಸಿ ಕಸ, ಸ್ಥಳೀಯ ಭಾರತ್ ಆಗ್ರೋ ಹಾಗೂ ಪುಡ್ ಫ್ಯಾಕ್ಟರಿಗಳಲ್ಲಿ ಸಂಗ್ರಹವಾಗುವ ಹಸಿ ಕಸ ಹಾಗೂ ದ್ರವ ತ್ಯಾಜ್ಯವನ್ನು ಬಳಸಿಕೊಂಡು ನೂತನ ತಂತ್ರಜ್ಞಾನ ಹಾಗೂ ಯಾಂತ್ರಿಕ ವಿಧಾನದಲ್ಲಿ ವೈಜ್ಞಾನಿಕವಾಗಿ ಅನಿಲ ಉತ್ಪಾದನೆ ಮಾಡಲಾಗುತ್ತದೆ.
ಅನಿಲ ಉತ್ಪಾದನೆಯಾಗಿ ಉಳಿದ ಶೇಷ ವಸ್ತು ಹಾಗೂ ಸ್ಲರಿ ನೀರು ತೋಟಗಳಿಗೆ ಗೊಬ್ಬರವಾಗಿ ಬಳಕೆಯಾಗಲಿದೆ. ತ್ಯಾಜ್ಯದ ಜೊತೆ ಮಿಶ್ರಣಮಾಡಲು 1 ಲಕ್ಷ ಲೀಟರ್ ನೀರಿನ ಅಗತ್ಯವಿದ್ದು ಅದಕ್ಕೂ ಶುದ್ದ ನೀರು ಬಳಕೆ ಮಾಡದೆ ಸ್ಥಳೀಯ ಮಾಂಸದ ಅಂಗಡಿಗಳಲ್ಲಿ ಮಾಂಸ ತೊಳೆದ ನೀರನ್ನು ಸುಮಾರು 2 ಕಿ.ಮೀ. ದೂರದಿಂದ ಪೈಪ್ ಮೂಲಕ ಘಟಕಕ್ಕೆ ಪೂರೈಕೆ ಮಾಡಿಕೊಂಡು ಅನಿಲ ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತದೆ. ಇದರಿಂದಾಗಿ ಇದೊಂದು ಝೀರೋ ವೇಸ್ಟ್ ಯುನಿಟ್ ಆಗಿ ಕಾರ್ಯನಿರ್ವಹಿಸಲಿದೆ.
ಯಾಂತ್ರೀಕ ವಿಧಾನ:
ಪ್ರತ್ಯೇಕಿಸಲ್ಪಟ್ಟ ಎಲ್ಲಾ ರೀತಿಯ ಹಸಿಕಸವನ್ನು ಯಂತ್ರದ ಮೂಲಕ ಹುಡಿ ಮಾಡಿ ನೀರಿನ ಜೊತೆ ಬೆರೆಸಿ, ದನದ ಸೆಗಣಿಯೊಂದಿಗೆ ಮಿಶ್ರಣಗೊಳಿಸಿದಾಗ ಮಿಥೇನ್ ಅನಿಲವಾಗಿ ಪರಿರ್ವತನೆಯಾಗುತ್ತದೆ. ಅನಿಲ ತಯಾರಿಕೆಗೆ ಬೇಕಾದಂತಹ ಸುಧಾರಿತ ಯಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ. ದೊಡ್ಡ ಬಲೂನಲ್ಲಿ ಅನಿಲ ಸಂಗ್ರಹಗೊಂಡರೆ, ಇದರೊಂದಿಗಿನ ವಾಸನೆ ರಹಿತ ನೀರು ದ್ರವ ಗೊಬ್ಬರವಾಗಿ ಹೊರ ಬರುತ್ತದೆ. ಗ್ರಾವಿಟಿ ವಿಧಾನದಲ್ಲಿ ಈ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಉತ್ಪತ್ತಿಯಾದ ಅನಿಲವನ್ನು ಸಿಲಿಂಡರ್ ಮೂಲಕ ತುಂಬಲಾಗುತ್ತದೆ. ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿದ್ದು 0.60 ಎಕ್ರೆ ವಿಸ್ತೀಣದಲ್ಲಿ ಘಟಕ ನಿರ್ಮಾಣಗೊಂಡಿದೆ. ನಿರ್ವಹಣೆ ನೋಡಿಕೊಳ್ಳುತ್ತಿರುವ ಕಂಪೆನಿಯ ವತಿಯಿಂದ 6 ಮಂದಿ ಹಾಗೂ ಇತರ ಮೂರು ಮಂದಿ ಸೇರಿ ಒಟ್ಟು 9 ಮಂದಿ ಕಾರ್ಮಿಕರು ಈ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಘಟಕದ ಸುತ್ತಲೂ ಹಸಿರು ವಾತವರಣ:
ಒರ್ವ ಪ್ರಗತಿಪರ ಕೃಷಿಕರೂ ಆಗಿರುವ ಶಾಸಕ ರಾಜೇಶ್ ನಾಕ್ ಅವರು ಈ ಘಟಕದ ಸುತ್ತ ಹಸಿರು ವಾತವರಣವನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರೆ. ಖಾಲಿ ಉಳಿದಿರುವ ಸ್ಥಳದಲ್ಲಿ ಮಲ್ಲಿಗೆ, ಶ್ರೀಗಂಧ, ಹಲಸು, ಬೋವು, ಬಿದಿರಿನ ಗಿಡಗಳನ್ನು ಬೆಳೆದಿದ್ದು ಈ ಘಟಕದ ಸುತ್ತಮುತ್ತ ಹಸಿರು ನಳನಳಿಸುವಂತೆ ಮಾಡಲಿದ್ದಾರೆ.
ಮಣ್ಣು ಪರೀಕ್ಷಾ ಕೇಂದ್ರ:
ಸಿಎನ್ಜಿ ಉತ್ಪತ್ತಿಯಾಗಿ ಉಳಿಯುವ ಘನ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ ವಿಶೇಷವೆಂದರೆ ರೈತರ ತೋಟದ ಮಣ್ಣಿಗೆ ಹೊಂದಿಕೆಯಾಗುವಂತಹ ಗೊಬ್ಬರವಾಗಿ ಪರಿವರ್ತಿಸಿ ಮಣ್ಣಿನ ಸತ್ವವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಲಾಗಿದೆ. ಅದಕ್ಕಾಗಿ ಮಣ್ಣು ಪರೀಕ್ಷಾ ಕೇಂದ್ರವನ್ನು ಈ ಘಟಕದಲ್ಲಿಯೇ ಆರಂಭಿಸುವ ಯೋಜನೆ ಇದೆ. ಕೃಷಿ ವಿಜ್ಞಾನಿಯನ್ನು ನೇಮಿಸಿಕೊಂಡು ಈ ಘಟಕದಿಂದ ರೈತರಿಗೂ ಉಪಯೋಗವಾಗುವ ಯೋಜನೆ ಹಾಕಿಕೊಳ್ಳಲಾಗಿದೆ.
ಶೀಘ್ರ ಉದ್ಘಾಟನೆ:
ಒಡ್ಡೂರು ಎನರ್ಜಿ ರಿನಿವೇಬಲ್ ನ್ಯಾಚುರಲ್ ಗ್ಯಾಸ್ ಪ್ಲಾಂಟ್ ಎನ್ನುವ ಸಿಎನ್ಜಿ ಉತ್ಪಾದನಾ ಘಟಕದ ಅಂತಿಮ ಹಂತದ ಕೆಲಸಗಳು ನಡೆಯುತ್ತಿದೆ. ಶೀಘ್ರದಲ್ಲಿ ಘಟಕದ ಉದ್ಘಾಟನಾ ಸಮಾರಂಭ ನಡೆಯಲಿದ್ದು ಕೇಂದ್ರ ಹಾಗೂ ರಾಜ್ಯ ಸರಕಾರದ ಸಚಿವರು, ಉನ್ನತ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.