ಹಿರಿಯ ಸಾಹಿತಿ, ಲೇಖಕಿ ಡಾ ಸಾರಾ ಅಬೂಬಕರ್ ನಿಧನ

ಮಂಗಳೂರು: ಹಿರಿಯ ಸಾಹಿತಿ, ಲೇಖಕಿ ಡಾ ಸಾರಾ ಅಬೂಬಕರ್ (87) ಇಂದು ನಿಧನರಾಗಿದ್ದಾರೆ. ಕೆಲವು ಸಮಯಗಳಿಂದ ವಯೋಸಜಹ ಖಾಯಿಲೆಯಿಂದ ಬಳಲುತ್ತಿದ್ದ ಅವರು ಮಂಗಳೂರಿನ ಲೇಡಿ ಹಿಲ್ ಬಳಿಯಿರುವ ತಮ್ಮ ನಿವಾಸದಲ್ಲಿ ವಾಸವಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧರಾಗಿದ್ದಾರೆ. ಮೂಲತಃ ಕಾಸರಗೋಡಿನ ಚಂದ್ರಗಿರಿ ತೀರದವರಾದ ಸಾರಾ ವಿವಾಹವಾದ ಬಳಿಕ ಮಂಗಳೂರಿನಲ್ಲಿ ವಾಸವಿದ್ದರು. ಅಜ್ಜಿ ಹೇಳುತ್ತಿದ್ದ ಕಥೆಗಳಿಂದ ಆಕರ್ಷಿತರಾಗಿ ಸಾಹಿತ್ಯದಲ್ಲಿ ಏನಾದರೂ ಸಾಧಿಸಬೇಕೆಂಬ ಆಶಯ ಅವರ ಬಾಲ್ಯದಲ್ಲೇ ಮೂಡಿಬಂದಿತ್ತು.
ನಲವತ್ತು ದಾಟಿದ ನಂತರ ಸಾರಾ ಅಬೂಬಕ್ಕರ್ ಬರೆಯಲು ಪ್ರಾರಂಭಿಸಿದರು. ಹೀಗೆ ಅವರು ಬರೆದ ಮೊದಲ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಈ ಕಥೆಯಲ್ಲಿ ಹೊರಹೊಮ್ಮಿದ ವಾಸ್ತವಿಕ ಬದುಕಿನ ಚಿತ್ರಣ ಮತ್ತು ಧರ್ಮದ ಕಟ್ಟುಪಾಡುಗಳಲ್ಲಿ ಶೋಷಿತಗೊಂಡ ಮಹಿಳೆಯರ ದ್ವನಿಗಳು ಅಸಂಖ್ಯಾತ ಓದುಗರ ಹೃದಯವನ್ನು ತಟ್ಟಿ ಈ ಕಾದಂಬರಿ ಎಲ್ಲೆಡೆಯು ಮೆಚ್ಚುಗೆ ಪಡೆಯಿತು. ಚಂದ್ರಗಿರಿಯ ತೀರದಲ್ಲಿ, ಸಹನಾ, ಸುಳಿಯಲ್ಲಿ ಸಿಕ್ಕವರು, ಪಂಜರ, ಇಳಿಜಾರು ಇವರ ಕಾದಂಬರಿಗಳು. ಚಪ್ಪಲಿಗಳು, ಪಯಣ ಮತ್ತು ಇತರ ಕಥೆಗಳು, ಸುಮಯ್ಯಾ, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು ಇವರ ಪ್ರಸಿದ್ಧ ಕಥಾ ಸಂಕಲನಗಳು ಇವರ ಸಾಹಿತ್ಯ ಕ್ಷೇತ್ರ ಅಪೂರ್ವ ಸಾಧನೆಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ. ಅನುಪಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿಗಳು ಅರಸಿ ಬಂದಿದೆ.
