ಕರಾವಳಿ ಲೇಖಕಿಯರ ವಾಚಕಿಯರ ಸಂಘ ರಿ.ಇದರ ವತಿಯಿಂದ ನಡೆದ ಸಾರಾ ದತ್ತಿ ಪ್ರಶಸ್ತಿ ಹಾಗೂ ಚಂದ್ರ ಭಾಗಿ ರೈ ದತ್ತಿಬಹುಮಾನ ಕಾರ್ಯಕ್ರಮ

ನಾಡೋಜ ಸಾರಾ ಪ್ರಶಸ್ತಿಯನ್ನು ಶ್ರೀ ಮುದ್ರಾಡಿ ಹಾಗೂ ಚಂದ್ರಭಾಗಿ ರೈ ದತ್ತಿ ಬಹುಮಾನವನ್ನು ಅಕ್ಷತಾರಾಜ್ ಪೆರ್ಲ ಇವರಿಗೆ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸಾಹಿತ್ಯ ಸದನದಲ್ಲಿ ಪ್ರದಾನ ಮಾಡಲಾಯಿತು.

ದಿನಾಂಕ 28-1-2023 ರಂದು ಅಪರಾಹ್ನ 2:30 ಕ್ಕೆ ಉರ್ವಸ್ಟೋರ್ ನ ಸಾಹಿತ್ಯ ಸದನದಲ್ಲಿ ಕರಾವಳಿ ಲೇಖಕಿಯರ ಸಂಘದ ಹಿರಿಯ ಸಾಹಿತಿಗಳಾದ ಸಾರಾ ಅಬೂಬಕ್ಕರ್ ದತ್ತಿ ಪ್ರಶಸ್ತಿ ಮತ್ತು ಚಂದ್ರಭಾಗಿ ರೈ ದತ್ತಿ ಬಹುಮಾನ ಕಾರ್ಯಕ್ರಮವು ಡಾ.ಜ್ಯೋತಿ ಚೆಳೈರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಾರಾ ಅಬೂಬಕ್ಕರ್ ದತ್ತಿ ಪ್ರಶಸ್ತಿಯನ್ನು ಶ್ರೀ ಮುದ್ರಾಡಿಯವರು ಹಾಗೂ ಚಂದ್ರಭಾಗಿ ರೈ ದತ್ತಿ ಬಹುಮಾನವನ್ನು ಅಕ್ಷತಾರಾಜ್ ಪೆರ್ಲ ಇವರಿಗೆ ಪ್ರದಾನ ಮಾಡಲಾಯಿತು.

ಮೈಸೂರು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ವಿಶ್ರಾಂತ ನಿರ್ದೇಶಕರಾದ ಡಾ.ಶಿವರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿ ನಾಡೋಜ ಸಾರಾ ಅಬೂಬಕ್ಕರ್ ಕೇವಲ ಸಾಹಿತಿಯಾಗಿ ಗುರುತಿಸಿಕೊಂಡದ್ದು ಮಾತ್ರವಲ್ಲದೆ ಜನಪರ ಹೋರಾಟದಲ್ಲಿ ಕಾಣಿಸಿಕೊಂಡು ಸಾರ್ವಜನಿಕ ವಲಯದಲ್ಲೂ ಪ್ರತಿರೋಧದ ಧ್ವನಿಯಾಗಿದ್ದ ಮಹಿಳೆಯಾಗಿದ್ದರು ಎಂದರು.

ಕವನ ಸಂಕಲನಗಳ ತೀರ್ಪುಗಾರರಾಗಿ ಉಪಸ್ಥಿತರಿದ್ದ ಡಾ.ನಾಗಪ್ಪ ಗೌಡ ಮಾತನಾಡಿ ಮೌಲ್ಯ ಮಾಪನ ಮಾಡುವುದು ಅತ್ಯಂತ ಕಷ್ಟಕರ ಮಹಿಳೆಯರಿಗೆ ಧ್ವನಿಯಿಲ್ಲದಂತ ಕಾಲಘಟ್ಟದಲ್ಲೂ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಪರ ಧ್ವನಿ ಎತ್ತಿದ ಹಲವರನ್ನು ನಾವೂ ಕಾಣಬಹುದು. ಹಾಗೆಯೇ ಶ್ರೀ ಮುದ್ರಾಡಿಯವರ ಇಲ್ಲಗಳ ನಡುವೆ ಕವನ ಸಂಕಲನವೂ ಭಾಷೆ,ಲಯಗಳೊಂದಿಗೆ ವೈವಿಧ್ಯಮಯ ವಸ್ತು ಮತ್ತು ವರ್ತಮಾನದ ಸಂಕಟಗಳಿಗೆ ಧ್ವನಿಯಾಗಿ ಆರೋಗ್ಯವಂತ ಸಮಾಜವನ್ನು ರೂಪಿಸುವಂತಿದೆ ಎಂದರು.

ಅಧ್ಯಕ್ಷರಾದ ಡಾ.ಜ್ಯೋತಿ ಚೆಳೈರು ಮಾತನಾಡಿ ಮಾನವೀಯತೆಯ ಇನ್ನೊಂದು ಮುಖವೇ ವೈಚಾರಿಕ ಚಿಂತನೆಗಳು ಈ ನಿಟ್ಟಿನಲ್ಲಿ ಕರಾವಳಿ ಲೇಖಕಿಯರ ವಾಚಕಿಯರ ಸಂಘವು ಕಿರಿಯರನ್ನು ಹಿರಿಯರ ದಾರಿಯಲ್ಲಿ‌ ಮುನ್ನಡೆಯುವಂತೆ ಪ್ರೇರೆಪಿಸುತ್ತಿದೆ ಎಂದರು.

ಪ್ರಶಸ್ತಿ ಸ್ವೀಕರಿಸಿದ ಶ್ರೀ ಮುದ್ರಾಡಿ ಹಾಗೂ ಅಕ್ಷತಾರಾಜ್ ಪೆರ್ಲ ಈ ಪ್ರಶಸ್ತಿ ನಿರೀಕ್ಷೆಯಿರಲಿಲ್ಲ ಆದರೆ ಇಂದು ಈ ಪ್ರಶಸ್ತಿಯನ್ನು ನೀಡುವುದರ ಜೊತೆಗೆ ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿ ಪ್ರೋತ್ಸಾಹ ನೀಡಿದ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸದಸ್ಯೆಯರಿಗೆ ಕೃತಜ್ಞತೆ ಸಲ್ಲಿಸುತ್ತಾ ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ತೀರ್ಪುಗಾರರ ಪರವಾಗಿ ವೇದಿಕೆಯಲ್ಲಿದ್ದ ಬಿ.ಎಂ.ರೋಹಿಣಿಯವರು ಚಂದ್ರ ಭಾಗಿ ರೈ ಯವರ ಸಾಧನೆಗಳ ಬಗ್ಗೆ ಮಾತನಾಡುತ್ತ ಹಳ್ಳಿಯಲ್ಲಿದ್ದುಕೊಂಡು ತನ್ನ ಅದ್ಭುತ ಚಿಂತನೆಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನ್ನಡದ ಅಸ್ಮಿತೆಯ ಅರಿವಿನಂಚಿನ ಮಹತ್ವದ ಲೇಖಕಿಯಾಗಿ ಸಾಧನೆಗೈದವರು ಎಂದರು.

ಚಂದ್ರಭಾಗಿ ರೈ ಅವರ ಪುತ್ರಿ ಡಾ.ಕಾಂತಿರೈ ಮತ್ತು ಸಾರಾ ಅವರ ಸೊಸೆ ಡಾ.ಸಕೀನಾ ನಾಸೀರ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ.ಲೇ.ವಾ.ಸಂಘದ ಆಕೃತಿ ಭಟ್ ರವರ ಆಶಯಗೀತೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಬಿ.ಶೆಟ್ಟಿ ಪ್ರಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನು ಸ್ವಾಗತಿಸಿ, ಕಾರ್ಯದರ್ಶಿ ಸುಜಾತ ಕೊಡ್ಮಾಣ್ ಪ್ರಶಸ್ತಿ ಪತ್ರ ಓದಿದರು, ಕೋಶಾಧಿಕಾರಿ ಶರ್ಮಿಳಾ ಶೆಟ್ಟಿ ವಂದನಾರ್ಪಣೆಗೈದರು.ದಯಾನಂದ ಪೈ ಕಾಲೇಜ್ ಕಾರ್ ಸ್ಟ್ರೀಟ್ ಇಲ್ಲಿಯ ಪ್ರಾಧ್ಯಾಪಿಕೆ ಡಾ.ಜ್ಯೋತಿಪ್ರಿಯ ಇವರು ಕಾರ್ಯಕ್ರಮದ ನಿರೂಪಣೆ ಮಾಡಿದರು.

Related Posts

Leave a Reply

Your email address will not be published.