ಬೆಂಗಳೂರು: ಪೇರೂರು ರುಕ್ಕು ಪೂಜಾರ್ದಿ, ಬಾಗಿ ಪೂಜಾರ್ದಿ, ಲೆಚ್ಚು ಪೂಜಾರ್ದಿ ನೆನಪಿನ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ ಪ್ರದಾನ

ಬೆಂಗಳೂರಿನ ಹಸಿರು ತೋಟದ ಗ್ರೀನ್ ಪಾತ್ ಏರಿನಲ್ಲಿ ಪೇರೂರು ರುಕ್ಕು ಪೂಜಾರ್ದಿ, ಬಾಗಿ ಪೂಜಾರ್ದಿ, ಲೆಚ್ಚು ಪೂಜಾರ್ದಿ ನೆನಪಿನ ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ನಾದ ಬ್ರಹ್ಮ, ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ಮಾತನಾಡಿ, ಕಾಲವು ಅಳಿಸಲಾಗದ ಹೆಸರು ಶಕ್ತಿಯುತ ಬಂಡಾಯ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರದು. ಭಾರತದಲ್ಲಿ ನೆಲದ ಮಕ್ಕಳ ಬದುಕಿಗೆ ಮೊದಲು ದನಿ ನೀಡಿದ ಹೆಸರು ಸಾವಿತ್ರಿಬಾಯಿ ಫುಲೆಯವರದು. ಆದರೆ ನಾವು ಅಕ್ಷಯ ತೃತೀಯ ಚಿನ್ನ ಖರೀದಿಗೆ ಮುಗಿ ಬೀಳುತ್ತಿದ್ದೇವೆ, ಫುಲೆ ದಂಪತಿಗಳ ಹೋರಾಟದ ನೆನಪು ಅದಕ್ಕಿಂತ ಮುಖ್ಯ ಎಂದು ಹೇಳಿದರು.

ಶಿಕ್ಷಕಿಯರಾದ ಜಿ. ಸೌಭಾಗ್ಯ ಹಾಗೂ ಮತ್ತು ದಾಕ್ಷಾಯಿಣಿ ದೇವಿಯವರಿಗೆ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಾದ ಬ್ರಹ್ಮ ಹಂಸಲೇಖ ಅವರು ಇತರರೊಂದಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿ ಪಡೆದ ಸೌಭಾಗ್ಯ ಅವರು ಮಾತನಾಡಿ, ಈ ಗೌರವವು ನನ್ನ ವೃತ್ತಿ ಬದುಕನ್ನು ನಡೆಸಲು ಮಾರ್ಗದರ್ಶನವಾಗಿದೆ ಎಂದರು.
ದಾಕ್ಷಾಯಿಣಿ ದೇವಿ ಮಾತನಾಡಿ ಫುಲೆ ದಂಪತಿಯ ಸಾಧನೆ ಎದುರು ನಮ್ಮದು ಏನಲ್ಲ, ಏನಿಲ್ಲ. ಇದು ಸ್ಪೂರ್ತಿದಾಯಕ ಪ್ರಶಸ್ತಿ ಎಂದರು.

ಪ್ರಶಸ್ತಿ ಪ್ರಾಯೋಜಿಸಿದ ತುಳು ಧರ್ಮ ಸಂಶೋಧನಾ ಕೇಂದ್ರದ ಪೇರೂರು ಜಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜನ್ಮ ನೀಡಿದ ತಾಯಿ ನಮಗೆಲ್ಲ ಇದ್ದಾರೆ. ಆದರೆ ಕೆಲವರು ತಮ್ಮ ಕೆಲಸದಿಂದ ಎಲ್ಲರ ತಾಯಿ ಆಗುತ್ತಾರೆ. ಅವರಲ್ಲಿ ಮುಖ್ಯರು ಸಾವಿತ್ರಿಬಾಯಿ ಫುಲೆ ಎಂದರು.

ವೇದಿಕೆಯ ಅನಂತ ನಾಯ್ಕ್ ಅವರು ಕಾಲದ ಹೊಡೆತದಲ್ಲಿ ಫುಲೆ ದಂಪತಿಗಳ ಹೆಸರು ಅಡಿ ಬೀಳಬಾರದು. ವೈವಿಧ್ಯತೆಯ ಈ ದೇಶದಲ್ಲಿ ಎನ್‌ಇಪಿಯಂತಾ ವಿನಾಶಕ ಏಕತೆಗೆ ಅವಕಾಶ ಇಲ್ಲ ಎಂದರು.
ಡಾ.ಲೀಲಾ ಸಂಪಿಗೆಯವರು ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಸುಧಾರಣೆ ಮತ್ತು ಕಲಿಕೆಗಾಗಿ ಫುಲೆ ದಂಪತಿಯ ತ್ಯಾಗ ಇಡೀ ಪ್ರಪಂಚ ಕೊಂಡಾಡಬೇಕಾದುದು. ಹೆಣ್ಣುಮಕ್ಕಳ ಒಡಲ ಬೆಂಕಿ ಇನ್ನೂ ಆರಿಲ್ಲ ಎಂದು ಹೇಳಿದರು.
ಕೃಷ್ಣಮೂರ್ತಿಯವರು ಕಬೀರರ ದೋಹೆಗಳನ್ನು ಹಾಡಿದರು. ವೇದಿಕೆಯ ಜೊಹ್ರಾ ನಸೀರ್, ಸತೀಶ್ ಕುಮಾರ್ ಉಪಸ್ಥಿತರಿದ್ದರು. ಎ. ಕೆ. ಕರುಣಾಕರ ಅವರು ಇಡೀ ಕಾರ್ಯಕ್ರಮವನ್ನು ನಿರ್ವಹಿಸಿ, ನಿರೂಪಿಸಿದರು.
ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ಮಂಗಳೂರು, ಪೇರೂರಿನ ತುಳು ಧರ್ಮ ಸಂಶೋಧನಾ ಕೇಂದ್ರ ಹಾಗೂ ಬೆಂಗಳೂರಿನ ಮಾನವ ಬಂಧುತ್ವ ವೇದಿಕೆ ಸೇರಿ ಕಾರ್ಯಕ್ರಮ ಆಯೋಜಿಸಿದ್ದವು.